ಕನ್ನಡಪ್ರಭ ವಾರ್ತೆ ಆಲೂರು ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಅವರ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ ಜೆ ಕೃಷ್ಣೇಗೌಡ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ, ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮ ವಹಿಸಿ ವ್ಯಾಸಂಗ ಮಾಡಬೇಕು. ಪತ್ರಿಕೆ ಹಾಗೂ ಪುಸ್ತಕಗಳನ್ನು ನಿರಂತರವಾಗಿ ಓದುವುದರಿಂದಾಗಿ ಜ್ಞಾನಾರ್ಜನೆ ಆಗುತ್ತದೆ. ಕನ್ನಡಪ್ರಭ ದಿನಪತ್ರಿಕೆ ಬಳಗದವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇವಲ ಒಂದು ರುಪಾಯಿ ವೆಚ್ಚದಲ್ಲಿ ಯುವ ಆವೃತ್ತಿಯನ್ನು ನೀಡುತ್ತಿರುವುದು ಶ್ಲಾಘನೀಯ. ಈಗಿನ ಪರಿಸ್ಥಿತಿಯಲ್ಲಿ ಒಂದು ರುಪಾಯಿಗೆ ಏನೂ ಸಹ ಬರುವುದಿಲ್ಲ. ಹಾಗಾಗಿ ಕನ್ನಡಪ್ರಭ ಬಳಗದವರು ವಿದ್ಯಾರ್ಥಿಗಳಿಗೆ ಇದನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ಇಲಾಖೆಯಿಂದ ನಾನು ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಪಂಚಾಯತಿ ಮಾಜಿ ಸದಸ್ಯ ನಟರಾಜ ನಾಕಲಗೂಡು ಮಾತನಾಡಿ, ಕನ್ನಡಪ್ರಭ ಪತ್ರಿಕೆಯವರು ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಇಂತಹ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಲ್ಲಿ ಕನ್ನಡಪ್ರಭದ ಯುವ ಆವೃತ್ತಿಯ ಪಾತ್ರ ಪ್ರಮುಖವಾಗಿದೆ. ಇದರಿಂದಾಗಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ವಿದ್ಯಾರ್ಥಿನಿ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಆದುದರಿಂದಾಗಿ ವಿದ್ಯಾರ್ಥಿಗಳು ಈ ಪತ್ರಿಕೆಯ ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕೆಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೃಥ್ವಿ, ಒಂದು ಏಫೋರ್ ಸೈಜಿನ ಪೇಪರ್ ಜೆರಾಕ್ಸ್ ಅನ್ನು ಮಾಡಲು ಎರಡರಿಂದ ಮೂರು ರುಪಾಯಿ ತೆಗೆದುಕೊಳ್ಳುತ್ತಾರೆ. ಕೇವಲ ಒಂದು ರುಪಾಯಿಗೆ ವರ್ಣಮಯವಾದ ಪಠ್ಯ, ಪಠ್ಯೇತರ ವಿಷಯಗಳು ಹಾಗೂ ಸಾಮಾನ್ಯ ಜ್ಞಾನದ ಆಗರವಾಗಿರುವ ಈವ ಆವೃತ್ತಿಯನ್ನು ಕನ್ನಡಪ್ರಭ ಪತ್ರಿಕೆಯ ಸಂಪಾದಕರು ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಇದಕ್ಕಾಗಿ ನಾನು ಸಂಪಾದ ಕನ್ನಡಪ್ರಭ ಸಂಪಾದಕರನ್ನು ಅಭಿನಂದಿಸುವುದಾಗಿ ತಿಳಿಸಿದರು. ಕನ್ನಡಪ್ರಭ ಬಳಗದಿಂದ ಇಂತಹ ತಮ್ಮ ಕಾರ್ಯಗಳು ನಡೆಯಲಿ ಎಂದು ತಿಳಿಸಿದರು.ಕನ್ನಡಪ್ರಭ ತಾಲೂಕು ವರದಿಗಾರ ರಾಘವೇಂದ್ರ ಮಾತನಾಡಿ, ಈ ಶಾಲೆಯ ವಿದ್ಯಾರ್ಥಿಗಳ ಯುವ ಆವೃತ್ತಿಗೆ ತಗಲುವ ವೆಚ್ಚವನ್ನು ಈ ವಿದ್ಯಾರ್ಥಿಗಳ ಪೋಷಕರೇ ವಹಿಸಿಕೊಂಡಿರುವುದು ಶ್ಲಾಘನೀಯ. ಪೋಷಕರು ಈ ರೀತಿ ನಿರ್ಣಯ ಕೈಗೊಳ್ಳುವಲ್ಲಿ ಈ ಶಾಲೆಯ ಪ್ರಾಂಶುಪಾಲರ ಪಾತ್ರ ಪ್ರಮುಖವಾದದ್ದು. ಆದುದರಿಂದ ಅವರಿಗೆ ಹಾಗೂ ಅವರ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪ್ರಸರಣ ವಿಭಾಗದ ಕಿರಣ್, ಪ್ರಾಂಶುಪಾಲ ಪ್ರಕಾಶ್ ಬಿ ಎಚ್, ಕನ್ನಡ ಶಿಕ್ಷಕ ಅಣ್ಣಪ್ಪ,ಶಿಕ್ಷಕ ಸುಬ್ರಮಣ್ಯ ನಾಯಕ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.