ಸಂಡೂರು: ಪಟ್ಟಣದ ಕುಮಾರಸ್ವಾಮಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವೆಸ್ಕೊ ಕಂಪನಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಸ್ಕೊ ಕಂಪನಿ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹಾಗೂ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಪಟ್ಟಣದ ಹೆಸರಾಂತ ಕುಮಾರಸ್ವಾಮಿ ಶಾಲೆಯಲ್ಲಿ ಕಾರಣಾಂತರಗಳಿಂದ ದಾಖಲಾತಿ ಕುಸಿದಿತ್ತು. ಕಳೆದ ವರ್ಷ ಶಾಲೆಯಲ್ಲಿನ ದಾಖಲಾತಿ ಕೇವಲ 19 ಇತ್ತು. ಈ ವರ್ಷ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿರುವುದು, ಸುಸಜ್ಜಿತ ಕೊಠಿಡಿಗಳನ್ನು, ಮೂಲ ಸೌಕರ್ಯಗಳನ್ನು ಒದಗಿಸಿರುವುದರಿಂದ ಶಾಲೆಯ ದಾಖಲಾತಿ 156ಕ್ಕೆ ಹೆಚ್ಚಿದೆ. ಶಾಸಕರು ಹಾಗೂ ಸಂಸದರ ಕಾಳಜಿಯಿಂದ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶೀಘ್ರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವುದು. ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ವೆಸ್ಕೊ ಕಂಪನಿ ಅಧಿಕಾರಿ ಬಿ.ಎಸ್. ಬೊಮ್ಮಯ್ಯ ಮಾತನಾಡಿ, ವೆಸ್ಕೊ ಕಂಪನಿಯ ಸಂಸ್ಥಾಪಕ ದಿ. ಕೆ.ಎಸ್. ವೀರಭದ್ರಪ್ಪನವರು 27 ವರ್ಷಗಳ ಹಿಂದೆಯೇ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ಆರಂಭಿಸಿದ್ದರು. ಈ ಪರಂಪರೆಯನ್ನು ಕಂಪನಿ ಪ್ರತಿವರ್ಷ ಮಂದುವರೆಸಿಕೊಂಡು ಹೋಗುತ್ತಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ವೆಸ್ಕೊ ಕಂಪನಿ ವತಿಯಿಂದ ಸಂಡೂರು ಸುತ್ತಲಿನ 42 ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ₹29.34 ಲಕ್ಷ ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ವಿತರಿಸಿದೆ. ಈ ವರ್ಷ ಈ ಮೊತ್ತು ಹೆಚ್ಚುವ ಸಂಭವವಿದೆ ಎಂದರು.ವೆಸ್ಕೊ ಕಂಪನಿ ಅಧಿಕಾರಿ ಷಣ್ಮುಖಪ್ಪ ಮಂದಾಲ್ ಅವರು ವೆಸ್ಕೊ ಕಂಪನಿಯಿಂದ ಪ್ರತಿ ವರ್ಷ ಕಲಿಕಾ ಸಾಮಗ್ರಿಗಳಲ್ಲದೆ, ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುತ್ತಿದೆ ಎಂದರು.