ಸರ್ಕಾರಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆ

KannadaprabhaNewsNetwork | Published : Feb 23, 2024 1:48 AM

ಸಾರಾಂಶ

ಈಗಾಗಲೇ ಶಾಲೆಗಳಲ್ಲಿ ವಾರಕ್ಕೆರಡು ದಿನ ಮೊಟ್ಟೆ ವಿತರಣೆ ಮತ್ತು ವಾರಕ್ಕೆ 5 ದಿನ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಹಾಲು ವಿತರಣೆ ಮಾಡುತ್ತಿದ್ದು, ಈಗ ವಾರದ ಮೂರು ದಿನ ಹಾಲಿನ ಜೊತೆ ರಾಗಿ ಮಾಲ್ಟ್ ಬೆರೆಸಿ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಾಲಾ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ಉತ್ತಮ ಪೌಷ್ಟಿಕ ಆಹಾರವಾಗಿದ್ದು, ಈ ರಾಗಿ ಮಾಲ್ಟ್ ಹಾಲಿನಲ್ಲಿ ಬೆರೆಸಿ ಕುಡಿಯಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ನಗರದ ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ ಗುರುವಾರ ಸರ್ಕಾರದ ನೂತನ ಯೋಜನೆಯಾದ ಶಾಲಾ ಶಿಕ್ಷಣ ಇಲಾಖೆ, ಕೆಎಂಎಫ್ ಸಂಸ್ಥೆ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ಸಾಯಿ ಶೂರ್ ರಾಗಿ ಮಾಲ್ಟ್ ಹೆಲ್ತ್ ಮಿಕ್ಸ್ ವಿತರಣೆಯ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ವಾರಕ್ಕೆ ಮೂರು ದಿನ ಮಾಲ್ಟ್‌

ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆ ಮಾಡಲಾಗುವುದು. ಈಗಾಗಲೇ ಶಾಲೆಗಳಲ್ಲಿ ವಾರಕ್ಕೆರಡು ದಿನ ಮೊಟ್ಟೆ ವಿತರಣೆ ಮತ್ತು ವಾರಕ್ಕೆ 5 ದಿನ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಹಾಲು ವಿತರಣೆ ಮಾಡುತ್ತಿದ್ದು, ಈಗ ವಾರದ ಮೂರು ದಿನ ಹಾಲಿನ ಜೊತೆ ರಾಗಿ ಮಾಲ್ಟ್ ಬೆರೆಸಿ ಕುಡಿಯಲು ಸರ್ಕಾರ ಮತ್ತು ಸಾಯಿ ಶೂರ್ ಈ ಯೋಜನೆ ಜಾರಿಗೆ ತಂದಿವೆ ಎಂದರು.ಪೌಷ್ಟಿಕ ʼರಾಗಿ ಮಾಲ್ಟ್ʼ ಕೊಡುವ ಕಾರ್ಯಕ್ರಮ ಈಗ ಶುರುವಾಗಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳಿಗೆ ರಕ್ತಹೀನತೆ ಬರಲೇಬಾರದು. ಪೌಷ್ಟಿಕಾಂಶ ಕೊರತೆ ಆಗಲೇ ಬಾರದು. ಆಗ ಮಾತ್ರ ಮಕ್ಕಳು ಮಾನಸಿಕವಾಗಿ ಸದೃಡವಾಗಿ ಓದಿನಲ್ಲಿ ಹೆಚ್ಚು ಚುರುಕಾಗುತ್ತಾರೆ. ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುತ್ತಾರೆ ಎಂದರು.

ವೈಚಾರಿಕತೆಯುಳ್ಳ ಶಿಕ್ಷಣ ಅಗತ್ಯ

ಶ್ರೀಮಂತರ ಮಕ್ಕಳ ರೀತಿ ಬಡವರು, ಶ್ರಮಿಕರು, ದಲಿತ, ಶೂದ್ರರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು. ಏಕೆಂದರೆ ಮಕ್ಕಳೇ ದೇಶದ, ಸಮಾಜದ ಭವಿಷ್ಯವನ್ನು ರೂಪಿಸುತ್ತಾರೆ. ಶಿಕ್ಷಣದಿಂದ ಮಾತ್ರ ಸ್ವಾಭಿಮಾನ ಹೆಚ್ಚಾಗಲು ಸಾಧ್ಯ. ಜ್ಞಾನದ ಬೆಳವಣಿಗೆ ಶಿಕ್ಷಣದಿಂದ ಸಾಧ್ಯ. ಶಿಕ್ಷಣ ಅಂದರೆ ಕೇವಲ ಓದು, ಬರಹ ಕಲಿಸುವುದಲ್ಲ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ವೈಚಾರಿಕತೆಯುಳ್ಳ ಶಿಕ್ಷಣ ಅಗತ್ಯ ಎಂದು ಹೇಳಿದರು.

ಉನ್ನತ ಶಿಕ್ಷಣ ಪಡೆದ ವೈದ್ಯರು, ಎಂಜಿನಿಯರ್ ಗಳೂ ಈಗ ಮೌಢ್ಯಕ್ಕೆ ಜೋತು ಬಿದ್ದಿದ್ದಾರೆ. ಬಸವಾದಿ ಶರಣರು ಮೌಡ್ಯಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ವೈಚಾರಿಕ ಶಿಕ್ಷಣದಿಂದ ಮಾತ್ರ ಮೌಡ್ಯಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯ ಎನ್ನುತ್ತಾ ಬುದ್ದ, ಬಸವ, ಅಂಬೇಡ್ಕರ್ ಮಾತುಗಳನ್ನು ಉಲ್ಲೇಖಿಸಿದರು.ಬರುವ ವಾರ ಎಲ್ಲ ಶಾಲೆಗಳಲ್ಲಿ ಮಾಲ್ಟ್‌

ಸಾರ್ವಜನಿಕ ಶಿಕ್ಷಣ ಇಲಾಖೆಯ ಉನಿರ್ದೇಶಕ ಬೈಲಾಂಜಿನಪ್ಪ ಮಾತನಾಡಿ, ಪ್ರಾಯೋಗಿಕವಾಗಿ ನಮ್ಮ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ಶಾಲೆಯಲ್ಲಿ ಈ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಮುಂದಿನ ವಾರದಲ್ಲಿ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಹಾಲಿನ ಜೊತೆ ರಾಗಿ ಮಾಲ್ಟ್ ತಯಾರಿಸಿ ಕುಡಿಯಲು ತಿಳಿಸಿದ್ದು, ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನಿರ್ದೇಶಕಿ ಜಿ.ಶೋಭಾ,ಪ್ರಭಾರಿ ಸಹಾಯಕ ನಿರ್ದೇಶಕಿ ಹೆಚ್. ಆಶಾ, ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯ ಮುಖ್ಯಶಿಕ್ಷಕಿ ಉದಯಭಾರತಿ, ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಶ್ರೀನಿವಾಸ್,ರಘು, ಸೌಮ್ಯ, ಉಮಾದೇವಿ, ಅಕ್ಷರ ದಾಸೋಹ ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.

Share this article