ಕನ್ನಡಪ್ರಭ ವಾರ್ತೆ ಕೊಪ್ಪ
೭೫ನೇ ಗಣರಾಜ್ಯೋತ್ಸವದ ಸವಿ ನೆನಪಿಗಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ವತಿಯಿಂದ ಕೊಪ್ಪದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಸಂವಿಧಾನ ಪೀಠಿಕೆ ನೀಡಲಾಯಿತು.ಕೊಪ್ಪ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ ಅವರಿಗೆ ಸಂವಿಧಾನ ಪೀಠಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸರ್ಕಾರಿ ಆಸ್ಪತ್ರೆ, ಕೃಷಿ ಇಲಾಖೆ, ಪೊಲೀಸ್ ಠಾಣೆ, ಸಮಾಜ ಕಲ್ಯಾಣ ಇಲಾಖೆ, ತಾಪಂ ಸೇರಿ ಇಲಾಖೆಗಳಿಗೆ ಪೀಠಿಕೆ ನೀಡಲಾಯಿತು.
ಡಿಎಸ್‌ಎಸ್ ಅಂಬೇಡ್ಕರ್ ಧ್ವನಿ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ರಾಜಶಂಕರ್ ಸಂವಿಧಾನ ಪೀಠಿಕೆ ವಿತರಿಸಿ ಮಾತನಾಡಿ, ದೇಶದಲ್ಲಿ ಸಮಾನವಾದ ಬದುಕು, ಎಲ್ಲರಿಗೂ ಗೌರವದಿಂದ ಬಾಳುವ ಹಕ್ಕು, ಸರ್ಕಾರಿ ಕೆಲಸ ಜನಸಾಮಾನ್ಯರಿಗೂ ಜನಪ್ರತಿನಿಧಿಗಳಾಗುವ ಅವಕಾಶ, ಮತ್ತು ಮತದಾನದ ಹಕ್ಕನ್ನು ನೀಡಿರುವ ಅಂಬೇಡ್ಕರ್ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಿಗೂ ಸಂವಿಧಾನ ಪೀಠಿಕೆ ವಿತರಿಸುವ ಕಾರ್ಯಕ್ರಮ ಮುಂದುವರೆಯಲಿದೆ ಎಂದರು.ಶಾಲೆಗಳಲ್ಲಿ ಪ್ರಾರ್ಥನೆ ಬಳಿಕ ಸಂವಿಧಾನ ಪೀಠಿಕೆ ಓದಿಸಬೇಕು ಎಂದು ಸರ್ಕಾರದ ಸುತ್ತೋಲೆ ಇದೆ, ಅದನ್ನು ಪಾಲಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಂಡು ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸಬೇಕು. ಸಂಘಟನೆ ವತಿಯಿಂದ ಶಾಲೆಗಳಿಗೆ ಭೇಟಿ ನೀಡಿ ಅದನ್ನು ಪರಿಶೀಲಿಸಲಾಗುತ್ತದೆ ಎಂದರು.
ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಸಿ.ಅಶೋಕ್, ಯುವ ಘಟಕದ ಅಧ್ಯಕ್ಷ ಡಿ.ಜಿ.ಶಂಕರ್, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಮುತ್ತೂರು, ಸಹಕಾರ್ಯದರ್ಶಿ ಸತೀಶ್ ಬಸ್ರಿಕಟ್ಟೆ, ಕ್ಷೇತ್ರ ಉಸ್ತುವಾರಿ ಅಧ್ಯಕ್ಷ ರತ್ನಾಕರ್ ಹೊಸ್ಮಕ್ಕಿ, ತಾಲೂಕು ಮಹಿಳಾ ಸಮಿತಿ ಅಧ್ಯಕ್ಷೆ ಗುಲಾಬಿ, ತಾಲೂಕು ಡಿಎಸ್‌ಎಸ್ ಮತ್ತು ಮಹಿಳಾ ಸಂಘಟನೆ ಪದಾಧಿಕಾರಿ, ಸದಸ್ಯರು ಇದ್ದರು.