ರೈತರಿಗೆ ರಿಯಾಯಿತಿ ದರದಲ್ಲಿ ಪಿವಿಸಿ ಪೈಪ್ ವಿತರಣೆ

KannadaprabhaNewsNetwork | Published : Feb 21, 2025 12:46 AM

ಸಾರಾಂಶ

ರೈತರಿಗೆ ಕೃಷಿ ನೀರಾವರಿ ಅನುಕೂಲ ಕಲ್ಪಿಸಲು ಒಂದು ವರ್ಷದಲ್ಲಿ 700 ಜನ ರೈತರಿಗೆ ರಿಯಾಯಿತಿ ದರದಲ್ಲಿ ಪಿವಿಸಿ ಪೈಪ್‌ಗಳನ್ನು ವಿತರಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜೀ.ವಿ. ದಿನೇಶ್ ಗುರುವಾರ ತಿಳಿಸಿದರು. ಬೇಸಿಗೆಯಲ್ಲಿ ತೆಂಗು, ಅಡಿಕೆ, ಬಾಳೆ, ತರಕಾರಿ, ಶುಂಠಿ ಬೆಳೆಯುವ ರೈತರಿಗೆ ಹನಿ ನೀರಾವರಿ ಹಾಗೂ ಸ್ಪಿಂಕ್ಲರ್ ಅಳವಡಿಸಿಕೊಳ್ಳಲು ಗುಣಮಟ್ಟದ ಪೈಪ್‌ಗಳ ವಿತರಣೆ ಮಾಡಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ರೈತರಿಗೆ ಕೃಷಿ ನೀರಾವರಿ ಅನುಕೂಲ ಕಲ್ಪಿಸಲು ಒಂದು ವರ್ಷದಲ್ಲಿ 700 ಜನ ರೈತರಿಗೆ ರಿಯಾಯಿತಿ ದರದಲ್ಲಿ ಪಿವಿಸಿ ಪೈಪ್‌ಗಳನ್ನು ವಿತರಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜೀ.ವಿ. ದಿನೇಶ್ ಗುರುವಾರ ತಿಳಿಸಿದರು.

ನುಗ್ಗೇಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಿದ್ದ ಕೃಷಿ ಕಾರ್ಯಾಗಾರದಲ್ಲಿ ಪಿವಿಸಿ ಪೈಪ್‌ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ರೈತರ ವಂತಿಕೆ ಹಣ 9500 ಸಾವಿರ ಕಂಪನಿಗೆ ಕಟ್ಟಿದ 2 ದಿನಕ್ಕೆ ಪೈಪ್‌ಗಳನ್ನು ವಿತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಸಿಗೆಯಲ್ಲಿ ತೆಂಗು, ಅಡಿಕೆ, ಬಾಳೆ, ತರಕಾರಿ, ಶುಂಠಿ ಬೆಳೆಯುವ ರೈತರಿಗೆ ಹನಿ ನೀರಾವರಿ ಹಾಗೂ ಸ್ಪಿಂಕ್ಲರ್ ಅಳವಡಿಸಿಕೊಳ್ಳಲು ಗುಣಮಟ್ಟದ ಪೈಪ್‌ಗಳ ವಿತರಣೆ ಮಾಡಲಾಗುತ್ತಿದೆ ಎಂದರು.

2014ರಿಂದ 2019ರಲ್ಲಿ ಹೋಬಳಿಯ 450 ರೈತರಿಗೆ ಕೃಷಿ ಭಾಗ್ಯ ಯೋಜನೆ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು 3500 ರೈತರಿಗೆ ತುಂತುರು ನೀರಾವರಿ ಪೈಪ್ ಸಟ್ಟುಗಳನ್ನು ಕೊಡಿಸಲಾಗಿದೆ 1 ಎಕರೆ ಭೂಮಿ ಹೊಂದಿದ ರೈತರು 2500 ವಂತಿಕೆ ಹಣ ಕಟ್ಟಿದರೆ 18 ಪೈಪ್‌ಗಳು 3 ಜಟ್‌ಗಳು ಒಂದು ಎಕರೆ ಮೇಲ್ಪಟ್ಟ ಭೂಮಿ ಹೊಂದಿರುವ ರೈತರಿಗೆ 4,139 ಹಣವನ್ನು ಕಂಪನಿಗೆ ಸಂದಾಯ ಮಾಡಿದರೆ ಸರ್ಕಾರದ ರಿಯಾಯಿತಿಯಲ್ಲಿ 30 ಪೈಪ್‌ಗಳು 5 ಜಟ್‌ಗಳನ್ನು 4 ದಿನಗಳಲ್ಲಿ ಕೊಡಿಸಲಾಗುತ್ತದೆ. ರೈತರು ಇದರ ಅನುಕೂಲ ಪಡೆದುಕೊಳ್ಳಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ವಿಠಲ್ ಕುಮಾರ್ ಮಾತನಾಡಿ, ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು 50 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ರೈತ ಸಂಪರ್ಕ ಕೇಂದ್ರ ಹಾಗೂ ಗೋದಾಮು ನಿರ್ಮಾಣ ಮಾಡಿಸಿರುವುದರಿಂದ ಕೃಷಿ ಇಲಾಖೆಯ ಕೆಲಸ ಕಾರ್ಯಗಳಿಗೆ ಹೆಚ್ಚು ಅನುಕೂಲವಾಗಿದೆ. ಕೃಷಿ ಅಧಿಕಾರಿ ಜೀ.ವಿ. ದಿನೇಶ್ ರೈತರಿಗೆ ಬೇಕಾದ ಕೃಷಿ ಪರಿಕರಗಳನ್ನು ಸಕಾಲದಲ್ಲಿ ಕೊಡಿಸುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ವಿಜಯ ಕುಮಾರ್, ರಾಜೇಶ್ವರಿ, ಚೈತ್ರ, ಸಾವಯವ ಕೃಷಿಕ ರಮೇಶ್, ಹೆಬ್ಬಾಳಲು ಮಂಜೇಗೌಡ ಕಟ್ಟಿಗೆಹಳ್ಳಿ ಚೆನ್ನೇಗೌಡ, ಇತರರು ಹಾಜರಿದ್ದರು.

Share this article