ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸಣ್ಣ ಪುಟ್ಟ ಗಲಾಟೆಗಳ ಮಧ್ಯೆ ತಾಲೂಕಿನಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದೆ.ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಣ ಬಿಲಿಸಿನಿಂದ ತಪ್ಪಿಸಿಕೊಳ್ಳಲು ಮತದಾರರು ಬೆಳಗ್ಗೆ 8ರಿಂದಲೇ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.
ಮತದಾನ ಬಹಿಷ್ಕಾರದ ಬೆದರಿಕೆತಾಲೂಕಿನ ತುಂಬಿನಕೆರೆ ಸಣ್ಣ ತಾಂಡಾದಲ್ಲಿ ಮತಗಟ್ಟೆ ಇಲ್ಲದ ಕಾರಣ ಪಕ್ಕದ ತುಂಬಿನಕೆರೆ ದೊಡ್ಡ ತಾಂಡಾದ ಸರ್ಕಾರಿ ಶಾಲೆಯಲ್ಲಿರುವ, ಮತಗಟ್ಟೆಗೆ ಬಂದ ಮತದಾನ ಮಾಡಬೇಕಿತ್ತು. ಆದರೆ, ನಮ್ಮೂರಿನಲ್ಲೇ ಮತಗಟ್ಟೆ ಮಾಡಬೇಕು ಎಂದು ಈ ಹಿಂದೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರೂ ಮತಗಟ್ಟೆ ಕೇಂದ್ರ ತೆರೆದಿರುವ ಹಿನ್ನೆಲೆಯಲ್ಲಿ ನಾವು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಕೂಡಲೇ ಸೆಕ್ಟರ್ ಅಧಿಕಾರಿ ಚಂದ್ರಶೇಖರಯ್ಯ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಮತದಾರರ ಮನವೊಲಿಸುವ ಕೆಲಸ ಮಾಡಿದರು. ಆಗ ಎಲ್ಲ ಮತದಾರರು ಮತದಾನಕ್ಕೆ ಮುಂದಾದರು.ಮತಯಂತ್ರದಲ್ಲಿ ದೋಷ ಬದಲಾವಣೆ
ಪಟ್ಟಣದ ಎಸ್‌ಪಿವಿ ಸರ್ಕಾರಿ ಶಾಲೆಯಲ್ಲಿ ಅಣಕು ಮತದಾನ ಮಾಡುವ ಸಂದರ್ಭದಲ್ಲಿ 2 ಮತಯಂತ್ರಗಳಲ್ಲಿ ದೋಷ ಕಂಡು ಬಂದಿತ್ತು. ಕೂಡಲೇ ಅಧಿಕಾರಿಗಳು ಮತಯಂತ್ರಗಳನ್ನು ಬದಲಾವಣೆ ಮಾಡಿರುವ ಪ್ರಸಂಗ ಜರುಗಿದೆ. ಪಟ್ಟಣದ ತುಂಗಭದ್ರಾ ಪ್ರೌಢ ಶಾಲೆಯಲ್ಲಿ ಮತದಾನದ ನಂತರ ಮತಯಂತ್ರ ಕೈ ಕೊಟ್ಟಿತ್ತು. ಕೂಡಲೇ ಎಚ್ಚೆತ್ತ ಅಧಿಕಾರಿಗಳು 1 ಮತಯಂತ್ರವನ್ನು ಬದಲಾವಣೆ ಮಾಡಿದ್ದಾರೆ.ಸರದಿ ಸಾಲಿನಲ್ಲಿ ಶಾಸಕ
ಪಟ್ಟಣದ ತುಂಗಭದ್ರ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ಶಾಸಕ ಕೃಷ್ಣನಾಯ್ಕ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕಾಲ್ವಿ ತಾಂಡಾದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಉಳಿದಂತೆ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ನಂದಿಹಳ್ಳಿ ಮತಗಟ್ಟೆಯಲ್ಲಿ ಮತ ಹಾಕಿದ್ದಾರೆ. ಮಾಜಿ ಶಾಸಕ ಬಿ.ಚಂದ್ರನಾಯ್ಕ ಅಡವಿ ಮಲ್ಲನಕೆರೆ ತಾಂಡಾದ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.ಸಸಿಗಳ ವಿತರಣೆ
ತಾಲೂಕಿನ ಪಟ್ಟಣ ಸೇರಿದಂತೆ ಹಿರೇಹಡಗಲಿ, ಹೊಳಲು ಮತ್ತು ಇಟ್ಟಿಗಿ ಗ್ರಾಮಗಳಲ್ಲಿ ತೆರೆಯಲಾಗಿದ್ದ ಪಿಂಕ್ ಮತಗಟ್ಟೆ ಸೇರಿದಂತೆ, ಯುವ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ ಮತ್ತು ವಿಕಲಚೇತನರ ಮತಗಟ್ಟೆಯಲ್ಲಿ ಮೊದಲು ಮತದಾನ ಮಾಡಲು ಬರುವ ಮತದಾರರಿಗೆ ತಲಾವೊಂದು ಸಸಿ ಸೇರಿದಂತೆ 1 ಸಾವಿರ ಮತದಾರರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.ಮೊದಲ ಮತ ಹಾಕಲು ಖುಷಿ
ಮೊದಲ ಬಾರಿಗೆ ಮತಗಟ್ಟೆಗೆ ತೆರಳಿ ಮತ ಹಾಕಿರುವುದು ಬಹಳ ಖುಷಿ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿ ಉತ್ತಮ ಸರ್ಕಾರ ರಚನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎನ್ನುತ್ತಾರೆ ಪ್ರಥಮ ಬಾರಿಗೆ ಹಕ್ಕು ಚಲಾಯಿಸಿದ ಟಿ. ಕಾವ್ಯ.ತಾಲೂಕಿನ 218 ಮತಗಟ್ಟೆಗಳಲ್ಲಿ ಮತದಾರರಿಗೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಂಗವಿಕಲ ಹಾಗೂ ವಯಸ್ಸಾಗಿರುವ ಮತದಾರರನ್ನು ಕರೆ ತರಲು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಮಾನ್ಯರ ಮಸಲವಾಡ ಗ್ರಾಮದಲ್ಲಿ ವಯಸ್ಸಾಗಿರುವ ತಾಯಿಯನ್ನು ಮಗ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಿದರು.