ನಟ ದರ್ಶನ್‌ಗೆ ಸರ್ಜಿಕಲ್ ಚೇರ್ ವಿತರಣೆ

KannadaprabhaNewsNetwork |  
Published : Sep 03, 2024, 01:32 AM ISTUpdated : Sep 03, 2024, 01:33 AM IST
ಸಸ | Kannada Prabha

ಸಾರಾಂಶ

ಈಚೆಗೆ ಕಾರಾಗೃಹಕ್ಕೆ ಆಗಮಿಸಿದ್ದ ಉತ್ತರ ವಲಯದ ಡಿಐಜಿ ಟಿ.ಪಿ. ಶೇಷಾ ಬಳಿ ತನ್ನ ಆರೋಗ್ಯ ಸಮಸ್ಯೆ ಹೇಳಿಕೊಂಡಿದ್ದ ನಟ ದರ್ಶನ್.

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ಕೋರಿಕೆಯಂತೆ ಸೋಮವಾರ ಶೌಚಕ್ಕೆ ಸರ್ಜಿಕಲ್ ಚೇರ್ ನೀಡಲಾಗಿದೆ.

ನಟ ದರ್ಶನ್‌ನ ಆರೋಗ್ಯ ಸಂಬಂಧಿ ದಾಖಲೆಗಳನ್ನು ಪರಿಶೀಲಿಸಿದ ವೈದ್ಯರು, ಇಂಡಿಯನ್ ಶೈಲಿಯ ಶೌಚಾಗೃಹದಿಂದ ಸಮಸ್ಯೆಯಾಗುತ್ತಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಜಿಲ್ಲಾಸ್ಪತ್ರೆಯಿಂದ ತಂದ ಸರ್ಜಿಕಲ್ ಚೇರ್‌ನ್ನು ನಟ ದರ್ಶನ್ ಗೆ ವಿತರಿಸಿದರು.

ಈಚೆಗೆ ಕಾರಾಗೃಹಕ್ಕೆ ಆಗಮಿಸಿದ್ದ ಉತ್ತರ ವಲಯದ ಡಿಐಜಿ ಟಿ.ಪಿ. ಶೇಷಾ ಬಳಿ ತನ್ನ ಆರೋಗ್ಯ ಸಮಸ್ಯೆ ಹೇಳಿಕೊಂಡಿದ್ದ ನಟ ದರ್ಶನ್, ಮಲಬದ್ಧತೆ ಸಮಸ್ಯೆಯಿದೆ. ಭಾರತೀಯ ಶೈಲಿ ಶೌಚಾಲಯ ಬಳಕೆಗೆ ಕಷ್ಟವಾಗುತ್ತಿದೆ. ಹೀಗಾಗಿ ಗಟ್ಟಿಪದಾರ್ಥದ ಊಟ ಮಾಡಲು ಹಿಂದೇಟು ಹಾಕುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರು. ಸರ್ಜಿಕಲ್ ಚೇರ್ ನೀಡುವ ಕುರಿತು ಆರೋಗ್ಯದ ಸ್ಥಿತಿಗತಿಯ ದಾಖಲೆಗಳನ್ನು ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟಿ.ಪಿ.ಶೇಷಾ ಹೇಳಿದ್ದರು. ನಿರೀಕ್ಷೆಯಂತೆಯೇ ಸೋಮವಾರ ದರ್ಶನ್ ಗೆ ಸರ್ಜಿಕಲ್ ಚೇರ್ ನೀಡಲಾಗಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಮಾದರಿಯ ಸರ್ಜಿಕಲ್ ಚೇರ್ ಹೊರತುಪಡಿಸಿದರೆ, ಬೇರೆ ಯಾವುದೇ ಬೇಡಿಕೆಯಿಟ್ಟಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.

ನಟನ ಆರೋಗ್ಯ ಸ್ಥಿರ..............

ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರಗೊಂಡು ಐದು ದಿನಗಳು ಕಳೆದಿದ್ದು ಜೈಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಈ ಮೊದಲೇ ಇದ್ದ ಮೈ-ಕೈನೋವು, ಬೆನ್ನುಮೂಳೆ ಸಮಸ್ಯೆ ಹೊರತುಪಡಿಸಿದರೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರದಿಂದ ಮೋಡಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿರುವುದರಿಂದ ಬಳ್ಳಾರಿಯ ಬೇಸಿಗೆಯ ಬಿಸಿ ನಟ ದರ್ಶನ್ ಗೆ ತಾಕಿಲ್ಲ. ಜೈಲು ಸೇರಿದ ಮೊದಲ ದಿನ ಊಟ ನಿರಾಕರಿಸಿದ್ದ ನಟನೀಗ ಎಲ್ಲ ಕೈದಿಗಳಂತೆಯೇ ಊಟ, ಉಪಹಾರ ಮಾಡುತ್ತಿದ್ದಾರೆ. ದಿನಕ್ಕೆರೆಡು ಬಾರಿ ಒಂದಷ್ಟು ಹೊತ್ತು ವಾಕಿಂಗ್ ಮಾಡುತ್ತಿದ್ದಾರೆ.

ಬಳ್ಳಾರಿ ಜೈಲಿನ ಹೈ ಸೆಕ್ಯುರಿಟಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಚಲನ ವಲನಗಳ ನಿಗಾ ಮುಂದುವರಿದಿದೆ. ನಿತ್ಯ ಓಡಾಟದ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ನಟನ ನಿತ್ಯದ ದಿನಚರಿ ಹಾಗೂ ಜೈಲುವಾಸ ಕುರಿತು ಸ್ಥಳೀಯರಲ್ಲೂ ತೀವ್ರ ಕುತೂಹಲವಿದೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ