ಕಂಬಿಬಾಣೆ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

KannadaprabhaNewsNetwork | Published : Nov 10, 2023 1:00 AM

ಸಾರಾಂಶ

ಕಂಬಿಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲು ತಾವು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ಮತ್ತು ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಂಬಿಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲು ತಾವು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ಮತ್ತು ಸಮಾಜ ಸೇವಕ ಟಿ.ಕೆ.ಸಾಯಿಕುಮಾರ್ ಹೇಳಿದರು.ಕಂಬಿಬಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ತಾವು ಕೊಡುಗೆಯಾಗಿ ನೀಡಿದ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದರು.

ತಾವು ಸೇರಿದಂತೆ ಹೆಚ್ಚಿನವರು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರು ಹಿಂದುಳಿಯುತ್ತಾರೆ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಬುದ್ಧಿವಂತರು ಎಂಬ ಭ್ರಮೆ ನಮ್ಮಲ್ಲಿದೆ. ಅದನ್ನು ಹೊಗಲಾಡಿಸಬೇಕು ಎಂದು ಕರೆ ನೀಡಿದ ಅವರು, ಈಗಾಗಲೇ ತಮ್ಮ ಸ್ನೇಹಿತರು ಆಗಿರುವ ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿದ್ದು, ವಿಷಯ ಪ್ರಸ್ತಾಪಮಾಡಿದ್ದೇನೆ. ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಕೂಡ ಅವರು ನೀಡಿದ್ದಾರೆ. ಜೊತೆಗೆ ಮ್ಯಾಗಡೂರ್ ಶ್ರೀ ವಿಶ್ವನಾಥ ದೇವಸ್ಥಾನ ಆಡಳಿತ ಮಂಡಳಿಯವರು ಈ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದು, ಈ ಬಗ್ಗೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಸರ್ಕಾರದೊಂದಿಗೆ ವ್ಯವಹಾರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿ.ಪಂ. ಮಾಜಿ ಅಧ್ಯಕ್ಷೆ ಮತ್ತು ಮ್ಯಾಗೂಡೂರ್ ಶ್ರೀ ವಿಶ್ವನಾಥ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಸೀಮ್ಲಾ ಶ್ರೀನಿವಾಸ್ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಯ ವ್ಯಾಮೋಹಕ್ಕೆ ಒಳಾಗಾಗಿ ಕನ್ನಡ ಮಾಧ್ಯಮ ಶಾಲೆಗಳು ಹಿಂದುಳಿಯುತ್ತಿದ್ದು, ಕಂಬಿಬಾಣೆ ಶಾಲೆಯಲ್ಲಿ ಕೇವಲ 55 ಮಕ್ಕಳು ವ್ಯಾಸಂಗ ಮಾಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಸುಂಟಿಕೊಪ್ಪ ಲಯನ್ಸ್ ಮಾಜಿ ಅಧ್ಯಕ್ಷ, ಸ್ಥಳೀಯ ಕಾಫಿ ಬೆಳೆಗಾರ ಟಿ.ಕೆ.ರಾಜೀವ್ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಂಬಿಬಾಣೆ ಗ್ರಾ.ಪಂ. ಸದಸ್ಯ ಆರ್.ಆರ್.ಮೋಹನ್, ನಂಜರಾಯಪಟ್ಟಣ ಗ್ರಾ.ಪಂ. ಸದಸ್ಯ ಸುಮೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚೈತ್ರಾ ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ನಯನಾ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಲೋಕಮ್ಮ ವಂದಿಸಿದರು.

ಶಾಲಾಭಿವೃದ್ಧಿ ಮಂಡಳಿ ಶಿಕ್ಷಕರ ವತಿಯಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ಕೊಡುಗೆ ನೀಡಿದ ಟಿ.ಕೆ.ಸಾಯಿಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸಾಯಿಕುಮಾರ್ ಅವರ ಪತ್ನಿ ವಿಜಯ, ಪುತ್ರ ವಿಶ್ವನಾಥ್, ಮ್ಯಾಗಡೂರ್ ವಿಶ್ವನಾಥ ದೇವಸ್ಥಾನದ ಕಾರ್ಯದರ್ಶಿ ರೂಪ ರಾಜೀವ್, ಕಮಲಾ ನೆಹರು ಮಹಿಳಾ ಸಮಾಜದ ಅಧ್ಯಕ್ಷೆ ಮೀನಾ ಸೇರಿದಂತೆ ಮಕ್ಕಳ ಪೋಷಕರು, ಸಾರ್ವಜನಿಕರು ಶಾಲಾ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಾಲಾ ಮಕ್ಕಳು ಪ್ರದರ್ಶಿಸಿದ ಕಂಸಳೆ ನೃತ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತ್ತಲ್ಲದೆ, ವೇದಿಕೆಯಲ್ಲಿದ್ದ ಗಣ್ಯರು ಎಲ್ಲ ಮಕ್ಕಳಿಗೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

Share this article