ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗು ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕದ ಸಹಯೋಗದಲ್ಲಿ ಇಲ್ಲಿನ ಕೇರಳ ಸಮಾಜಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘ ಕೊಡಮಾಡುವ ಶೈಕ್ಷಣಿಕ ದತ್ತಿ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆ ಮತ್ತು ಪತ್ರಿಕಾ ವಿತರಕರು ಒಂದು ಕುಟುಂಬವಿದ್ದಂತೆ. ಪತ್ರಿಕಾ ಸಂಪಾದಕ ಎಷ್ಟೇ ಉತ್ತಮವಾಗಿ ಪತ್ರಿಕೆ ಹೊರತಂದರೂ, ಅದು ಓದುಗರಿಗೆ ತಲುಪದಿದ್ದರೆ ವ್ಯರ್ಥ. ಆದ್ದರಿಂದ ಪತ್ರಿಕೆಗಳ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ವಿಶ್ಲೇಷಿಸಿದರು.ಪತ್ರಿಕೆ ಓದುವ ಸಂಖ್ಯೆ ಕಡಿಮೆ:
ಕಳೆದ 10 ವರ್ಷಗಳಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಪತ್ರಿಕೆಗಳ ಬೆಲೆ ಮಾತ್ರ ನಿಂತ ನೀರಾಗಿದೆ ಎಂದು ನುಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಪತ್ರಿಕಾ ವಿತರಕರೇ ಪತ್ರಿಕೆಗಳಿಗೆ ಸುದ್ದಿ ನೀಡುವ ವರದಿಗಾರರಾಗಿಯೂ ಆಗಿರುವುದರಿಂದ ಅವರು ಸಮಾಜದ ಸಮಸ್ಯೆಗಳನ್ನು ಪತ್ರಿಕೆಗಳ ಗಮನಕ್ಕೆ ತರುವುದರಿಂದ ಸಮಾಜದಲ್ಲೂ ಸಾಕಷ್ಟು ಬದಲಾವಣೆ ತರಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಅವರು, ಪತ್ರಿಕೆಗಳು, ಪತ್ರಿಕಾ ವಿತರಕರು ಮತ್ತು ಪತ್ರಕರ್ತರ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರಲ್ಲದೆ, ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಪತ್ರಿಕಾ ವಿತರಕರಿಗೆ ವಸತಿ ಸಂಕೀರ್ಣಗಳನ್ನು ಸರ್ಕಾರ ನಿರ್ಮಿಸಿಕೊಡಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಅನುದಾನ ನೀಡುವುದಾಗಿ ಘೋಷಿಸಿದ್ದು, ಅದು ಇನ್ನೂ ಅನುಷ್ಠಾನಗೊಂಡಿಲ್ಲ ಎಂದು ವೇದಿಕೆಯಲ್ಲಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರ ಗಮನಸೆಳೆದರು. ಅಲ್ಲದೆ ಈ ನಿಟ್ಟಿನಲ್ಲಿ ಸರಕಾರದ ಗಮನಸೆಳೆಯುವಂತೆ ಮನವಿ ಮಾಡಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪತ್ರಿಕಾ ವಿತರಕರು ಏಜೆಂಟರು ಅಸಂಘಟಿತ ಕಾರ್ಮಿಕರ ವಿಭಾಗದಲ್ಲಿ ಬರುತ್ತಿದ್ದು ಸಾಮಾಜಿಕ ಭದ್ರತೆಗಳನ್ನು ಹೊಂದಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಸಂಘದ ಮೂಲಕ ಪ್ರತಿಯೊಬ್ಬರು ಈ ಸೌಲಭ್ಯವನ್ನು ಹೊಂದಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಇತ್ತೀಚಿಗೆ ಸುಂಟಿಕೊಪ್ಪದಲ್ಲಿ ಜಾತ್ಯತೀತ ಮತ್ತು ಪಕ್ಷಾತೀತ ನೆಲೆಗಟ್ಟಿನಲ್ಲಿ ಸಂಗಡಿಸಲಾಗಿರುವ ವೇವ್ ಸಂಘಟನೆಯ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರಾದ ಪರಾಜ್ ಉಸ್ಮಾನ್ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಟಿ.ಜಿ.ಸತೀಶ್, ವೇವ್ ಸಂಸ್ಥೆಯ ಅಧ್ಯಕ್ಷ ಕೆ.ಎ. ಲತೀಫ್ ಕೇರಳಂ ಸಮಾಜದ ಪಿ. ರವೀಂದ್ರನ್ ಜಿಲ್ಲಾ ಸಂಘದ ಖಜಾಂಜಿ ಕಾರ್ಯಕ್ರಮದ ಸಂಚಾಲಕರಾದ ಟಿ.ಕೆ.ಸಂತೋಷ್ ಉಪಸ್ಥಿತರಿದ್ದರು.
ಮೊದಲಿಗೆ ಸಂಘದ ಉಪಾಧ್ಯಕ್ಷ ನವೀನ್ ಚಿನ್ನಪ್ಪ ಪ್ರಾರ್ಥಿಸಿದರು. ತಾಲೂಕು ಸಂಘದ ಸಲಹೆಗಾರ ಕೆ.ತಿಮ್ಮಪ್ಪ ಸ್ವಾಗತಿಸಿ, ಖಜಾಂಜಿ ಕೆ.ಎಸ್.ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ತಾಲೂಕು ಸಂಘದ ಸಹಕಾರ್ಯದರ್ಶಿ ಬಿ.ಎನ್.ರವಿಕುಮಾರ್ ವಂದಿಸಿದರು.