ಜಿಲ್ಲೆಯ 20 ಸಾವಿರ ಬಿಪಿಎಲ್ ಕಾರ್ಡ್ ರದ್ದು!

KannadaprabhaNewsNetwork |  
Published : Aug 12, 2024, 01:03 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಬಡವರಲ್ಲದಿದ್ದರೂ ವೈದ್ಯಕೀಯ ಚಿಕಿತ್ಸೆ, ಅನ್ನಭಾಗ್ಯ ಅಕ್ಕಿ, ಗೃಹಲಕ್ಷ್ಮೀ ಸೇರಿದಂತೆ ವಿವಿಧ ಯೋಜನೆಗಳಡಿ ಲಾಭ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಪಡೆದುಕೊಂಡಿದ್ದ 19,969 ಅಧಿಕ ಆದ್ಯತಾ (ಬಿಪಿಎಲ್) ಕಾರ್ಡ್‌ಗಳನ್ನು ಪತ್ತೆ ಹಚ್ಚಿರುವ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅವುಗಳನ್ನು ರದ್ದುಗೊಳಿಸಿ ಸ್ಪೇಷಲ್ ಡ್ರೈವ್ ನಡೆಸಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಬಡವರಲ್ಲದಿದ್ದರೂ ವೈದ್ಯಕೀಯ ಚಿಕಿತ್ಸೆ, ಅನ್ನಭಾಗ್ಯ ಅಕ್ಕಿ, ಗೃಹಲಕ್ಷ್ಮೀ ಸೇರಿದಂತೆ ವಿವಿಧ ಯೋಜನೆಗಳಡಿ ಲಾಭ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಪಡೆದುಕೊಂಡಿದ್ದ 19,969 ಅಧಿಕ ಆದ್ಯತಾ (ಬಿಪಿಎಲ್) ಕಾರ್ಡ್‌ಗಳನ್ನು ಪತ್ತೆ ಹಚ್ಚಿರುವ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅವುಗಳನ್ನು ರದ್ದುಗೊಳಿಸಿ ಸ್ಪೇಷಲ್ ಡ್ರೈವ್ ನಡೆಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಆರು ತಿಂಗಳ ಮಾಹಿತಿ ಸಂಗ್ರಹಿಸಿರುವ ಆಹಾರ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಸುಮಾರು 20 ಸಾವಿರ ಕುಟುಂಬಗಳು ಆರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆದಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಇನ್ನು ವೈದ್ಯಕೀಯ ಸೌಲಭ್ಯ ಪಡೆಯುವವರು ಅರ್ಜಿ ಹಾಕುವುದಕ್ಕಾಗಿ ಆಗಾಗ ಇಲಾಖೆಯಿಂದ ಪೋರ್ಟಲ್ ತೆರೆಯಲಾಗುತ್ತದೆ. ಆ ಸಂದರ್ಭದಲ್ಲಿ ವೈದ್ಯಕೀಯ ತುರ್ತು ಇಲ್ಲದವರೂ ಅರ್ಜಿ ಸಲ್ಲಿಸಿದ್ದಾರೆ. ಇದೆಲ್ಲ ಪರಿಶೀಲನೆ ಸಂದರ್ಭದಲ್ಲಿ ಪತ್ತೆಯಾಗಿದೆ.

ಈ ಕ್ರಮದ ಭಾಗವಾಗಿ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಳೆದ ಒಂದೇ ವಾರದಲ್ಲಿ 19,958 ಸಾವಿರ ಕಾರ್ಡ್‌ಗಳನ್ನು ರದ್ದು ಮಾಡಿದ್ದಾರೆ. ಈ ಮೂಲಕ ಕಳೆದ ಆರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆಯದ ಕುಟುಂಬಗಳನ್ನು ಪತ್ತೆ ಹಚ್ಚಿ ಅಕ್ರಮವಾಗಿ ಕಾರ್ಡ್ ಪಡೆದವರಿಗೆ ಬಿಸಿ ಮುಟ್ಟಿಸಿದ್ದಾರೆ. ಇದರೊಂದಿಗೆ ಆಹಾರ ಇಲಾಖೆಯು ಆದಾಯ ತೆರಿಗೆದಾರರು, 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು, ಸರ್ಕಾರಿ ನೌಕರರು ಅನಧಿಕೃತವಾಗಿ ಪಡೆದುಕೊಂಡಿದ್ದ ಕಾರ್ಡ್‌ಗಳನ್ನೂ ಸಹಿತ ರದ್ದುಗೊಳಿಸಲು ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಒಮ್ಮೆಯೂ ಪಡಿತರ ಪಡೆಯದ ಕುಟುಂಬಗಳನ್ನು ಪತ್ತೆ ಮಾಡಿದ್ದು ಅಥಣಿ-629, ಬೈಲಹೊಂಗಲ-1458, ಬೆಳಗಾವಿ 1392, ಚಿಕ್ಕೋಡಿ-1045, ಗೋಕಾಕ-1926, ಹುಕ್ಕೇರಿ-2324, ಕಾಗವಾಡ-423, ಖಾನಾಪುರ-2049, ಚನ್ನಮ್ಮನ ಕಿತ್ತೂರು-727, ಮೂಡಲಗಿ-1050, ನಿಪ್ಪಾಣಿ-548, ರಾಮದುರ್ಗ-1957, ರಾಯಬಾಗ-2423, ಸವದತ್ತಿ-2018 ಸೇರಿ ಒಟ್ಟು 19,969 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.

ರಾಜ್ಯದಲ್ಲಿ ಶೇ.80ರಷ್ಟು (1.27) ಬಿಪಿಎಲ್ ಕುಟುಂಬಗಳಿದ್ದು 4.37 ಕೋಟಿ ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಹೊಸ ಕಾರ್ಡ್‌ಗಳಿಗೆ ಸಲ್ಲಿಕೆಯಾದ 2.95 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಅನರ್ಹ ಕಾರ್ಡ್ ರದ್ದುಗೊಳಿಸಿ ಅವುಗಳ ಬದಲಾಗಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.

4020 ಕಾರ್ಡ್‌ಗಿಲ್ಲ ಡಿಬಿಟಿ :

ಹುಕ್ಕೇರಿ ತಾಲೂಕಿನಲ್ಲಿ 4020 ಬಿಪಿಎಲ್ ಪಡಿತರ ಚೀಟಿಗಳಿಗೆ ಅನ್ನಭಾಗ್ಯ ಅಕ್ಕಿಯ ನೇರ ನಗದು ವರ್ಗಾವಣೆ (ಡಿಬಿಟಿ) ಸಾಧ್ಯವಾಗುತ್ತಿಲ್ಲ. ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆ ಇಲ್ಲದಿರುವುದು, ಕಾರ್ಡ್‌ನೊಂದಿಗೆ ಆಧಾರ್‌ ಕಾರ್ಡ್ ಲಿಂಕ್ ಆಗದೇ ಇರುವುದು, ಬಿಪಿಎಲ್ ಕಾರ್ಡ್, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮ್ಯಾಪಿಂಗ್ ಆಗದೇ ಇರುವುದರಿಂದ ಇಷ್ಟು ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಸಾಧ್ಯವಾಗುತ್ತಿಲ್ಲ.

ಇದಕ್ಕಾಗಿ ಆಹಾರ ಇಲಾಖೆಯ ಇನ್‌ಸ್ಪೆಕ್ಟರ್‌ಗಳಿಗೆ ಪಡಿತರ ಕಾರ್ಡದಾರರ ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿ ಲಿಂಕ್ ಮಾಡಿಸುವ ಜವಾಬ್ದಾರಿ ವಹಿಸಲಾಗಿದೆ. ಅವರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳನ್ನು ಸಂಪರ್ಕಿಸಿ ಅಲ್ಲಿರುವ ಬಿಪಿಎಲ್ ಕಾರ್ಡದಾರರಿಗೆ ಮಾಹಿತಿ ನೀಡಿ ತಕ್ಷಣ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಲು ಮನವೊಲಿಸುವಂತೆ ಸೂಚಿಸಲಾಗಿದೆ. ಇದಕ್ಕಾಗಿ ಅಂಚೆ ಕಚೇರಿ ಸಿಬ್ಬಂದಿಯ ಸಹಯೋಗದೊಂದಿಗೆ ತಕ್ಷಣ ಬಿಪಿಎಲ್ ಕಾರ್ಡ್ ಇದ್ದವರಿಗೆ ಖಾತೆ ತೆರೆಸಲಾಗುತ್ತಿದೆ.

-- ಕೋರ್ಟ್ ---ಆರು ತಿಂಗಳಿಂದ ಪಡಿತರ ಪಡೆಯದೇ ಬರೀ ಇತರ ಸೌಲಭ್ಯಗಳಿಗಾಗಿ ಬಿಪಿಎಲ್ ಕಾರ್ಡ್ ಇಟ್ಟುಕೊಂಡು ಆರ್ಥಿಕವಾಗಿ ಸ್ಥಿತಿವಂತರಾಗಿರುವವರ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಅರ್ಹರಿಗೆ ಯಾವುದೇ ರೀತಿಯ ತೊಂದರೆಯಾಗದು.

- ಮಲ್ಲಿಕಾರ್ಜುನ ನಾಯಕ, ಉಪ ನಿರ್ದೇಶಕರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ