ನೌಕರರ ಬೇಕು, ಬೇಡಿಕೆಗೆ ಜಿಲ್ಲಾಡಳಿತ ಬದ್ಧ

KannadaprabhaNewsNetwork |  
Published : Nov 13, 2025, 01:00 AM IST
12ಡಿಡಬ್ಲೂಡಿ10 | Kannada Prabha

ಸಾರಾಂಶ

ಸರ್ಕಾರಿ ನೌಕರರ ಬೇಕು-ಬೇಡಿಕೆಗಳಿಗೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಜತೆಗೆ ವೃತ್ತಿಯಲ್ಲಿ ವಿಶೇಷ ಕೌಶಲ್ಯ ಹಾಗೂ ನೈಪುಣ್ಯತೆ ಪಡೆಯಲು ಕಾಲಕಾಲಕ್ಕೆ ಅಗತ್ಯ ತರಬೇತಿ ನೀಡುವುದು ಅವಶ್ಯವಾಗಿದೆ.

ಧಾರವಾಡ:

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಜನಪರ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಗೆ ಅನೇಕ ಪ್ರಶಸ್ತಿ, ಪುರಸ್ಕಾರ ಲಭಿಸಿವೆ. ಇದಕ್ಕೆ ಎಲ್ಲ ಸರ್ಕಾರಿ ನೌಕರರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಅನುಷ್ಠಾನದಲ್ಲಿನ ಬದ್ಧತೆ ಕಾರಣ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕದಿಂದ ಎಚ್.ಆರ್.ಎಂ.ಎಸ್ -2, ಇಎಸ್‌ಆರ್ ಮತ್ತು ಕೆಎಸ್‌ಎಸ್ ಯೋಜನೆ ಕುರಿತು ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿದ ಅವರು, ಸರ್ಕಾರಿ ನೌಕರರ ಬೇಕು-ಬೇಡಿಕೆಗಳಿಗೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಜತೆಗೆ ವೃತ್ತಿಯಲ್ಲಿ ವಿಶೇಷ ಕೌಶಲ್ಯ ಹಾಗೂ ನೈಪುಣ್ಯತೆ ಪಡೆಯಲು ಕಾಲಕಾಲಕ್ಕೆ ಅಗತ್ಯ ತರಬೇತಿ ನೀಡುವುದು ಅವಶ್ಯ ಎಂದರು.

ಗೌರವ ಧನ ಬಿಡುಗಡೆ:

ಜಿಲ್ಲೆಯಲ್ಲಿ ಕೈಗೊಂಡ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಶಸ್ವಿಯಾಗಿದೆ. ಇದರಲ್ಲಿ ಭಾಗವಹಿಸಿದ್ದ ನೌಕರರಿಗೆ ಗೌರವ ಧನ ನೀಡಲು ಸರ್ಕಾರದಿಂದ ಜಿಲ್ಲೆಗೆ ₹ 7 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆಯಾ ತಹಸೀಲ್ದಾರ್‌ರು ಗೌರವಧನ ಬಿಡುಗಡೆ ಮಾಡಲಿದ್ದಾರೆ. ಸಮೀಕ್ಷೆಯ ಸಮಯದಲ್ಲಿ ಆಕಸ್ಮಿಕವಾಗಿ ಅಪಘಾತ ಹಾಗೂ ಅವಘಡಗಳಿಗೆ ಒಳಗಾಗಿ ಅನಾರೋಗ್ಯ ಪಿಡಿತರಾದ ಸಿಬ್ಬಂದಿಗೆ ರಜೆ ಹಾಗೂ ವೈದ್ಯಕೀಯ ವೆಚ್ಚ ನೀಡಲು ತೀರ್ಮಾನಿಸಲಾಗಿದೆ. ಜತೆಗೆ ಅನಾರೋಗ್ಯ ಪೀಡಿತರ ವೈದ್ಯಕೀಯ ವೆಚ್ಚದ ಬಿಲ್‌ ತಕ್ಷಣ ಹೊಂದಾಣಿಕೆ ಮಾಡಿ, ಅವರಿಗೆ ಮರುಪಾವತಿ ಆಗುವಂತೆ ಕ್ರಮವಹಿಸಲು ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಡಿಡಿಪಿಐಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆರೋಗ್ಯ ಸಂಜೀವಿನಿ ಯೋಜನೆಯಡಿ ಈಗಾಗಲೇ ಜಿಲ್ಲೆಯ ವಿಶೇಷವಾಗಿ ಹುಬ್ಬಳ್ಳಿಯ 13 ಆಸ್ಪತ್ರೆಗಳು ನೋಂದಣಿಯಾಗಿವೆ. ಐದು ಆಸ್ಪತ್ರೆಗಳು ನೋಂದಣಿಯಾಗಲು ಒಪ್ಪಿಗೆ ನೀಡಿವೆ ಎಂದರು.

ತಂತ್ರಜ್ಞಾನ ಬಳಸಿ:

ಆಧುನಿಕ ತಂತ್ರಜ್ಞಾನದ ಬಳಕೆಯು ಪ್ರಸ್ತುತ ಅನಿವಾರ್ಯ. ಆಧುನಿಕ ತಂತ್ರಜ್ಞಾನದ ಬಳಕೆಯು ಸರ್ಕಾರಿ ಕಾರ್ಯವೈಖರಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಈ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ತರಬೇತಿ ಮುಖ್ಯವಾಗಿದ್ದು, ದಿನನಿತ್ಯದ ಕೆಲಸದ ಒತ್ತಡದ ಮಧ್ಯೆಯೂ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ತಾಂತ್ರಿಕವಾಗಿಯೂ ಎಲ್ಲರೂ ಜ್ಞಾನವಂತರಾಗಬೇಕು ಎಂದರು.

ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ ಯೋಜನಾಧಿಕಾರಿ ನಿರ್ಮಲಾ ಬಿ. ಹಾಗೂ ಸುಧಾಮಣಿ ಡಿ.ಎಸ್., ತಾಂತ್ರಿಕ ತರಬೇತುದಾರ ಸುಮಂತ್, ಕಾರ್ಯಾಧ್ಯಕ್ಷ ಎಂ.ಜಿ. ಸೊಲಗಿ, ಖಜಾಂಚಿ ಮಂಜುನಾಥ ಯಡಳ್ಳಿ, ಕಾಯದರ್ಶಿ ರಮೇಶ ಲಿಂಗದಾಳ, ರಾಜ್ಯ ಪರಿಷತ್‌ ಸದಸ್ಯ ದೇವಿದಾಸ ಶಾಂತಿಕರ, ಹಿರಿಯ ಉಪಾಧ್ಯಕ್ಷ ಡಾ. ಸುರೇಶ ಹಿರೇಮಠ, ವಿನಯ ಮುಶೆನ್ನವರ, ರಾಜೇಶ ಕೊನರಡ್ಡಿ, ಎಂ.ಎಂ. ನಾಯ್ಕ, ಜಗದೀಶ ವಿರಕ್ತಮಠ, ಸಂಗಮೇಶ ಬಾವಿಕಟ್ಟಿ, ಜಿ.ವಿ. ದೇಶಪಾಂಡೆ, ಆನಂದ ಹಟ್ಟೇನ್ನವರ ಮತ್ತಿತರರು ಇದ್ದರು.

ರಾಜ್ಯ ಸರ್ಕಾರಿ ನೌಕರರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾಗಿರುವ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಹೋಲ್ತಿಕೊಟಿ ಅವರನ್ನು ಗೌರವಿಸಲಾಯಿತು.

ಅಪಟೇಡ್‌ ಆಗದಿದ್ದರೆ ಔಟ್‌ಡೇಟ್‌ ಆಗ್ತೇವೆ...

ನೌಕರರು ಕಾಲಕ್ಕೆ ತಕ್ಕಂತೆ ತಮ್ಮ ಕೌಶಲ್ಯ ಮತ್ತು ಜ್ಞಾನ ನವೀಕರಿಸಿಕೊಳ್ಳಬೇಕು. ವೇಗದ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಪದ್ಧತಿಗಳು ನಿರಂತರವಾಗಿ ಬದಲಾಗುತ್ತಿವೆ. ಈ ಬದಲಾವಣೆಗಳಿಗೆ ತಕ್ಕಂತೆ ನೌಕರರು ತಮ್ಮನ್ನು ತಾವು ಅಪ್‌ಡೇಟ್ ಮಾಡಿಕೊಳ್ಳುವುದು ಅತ್ಯಗತ್ಯ. ಇಲ್ಲವಾದರೆ, ಔಟ್‌ಡೇಟ್ ಆಗುವ ಅನಿವಾರ್ಯತೆಗೆ ಸಿಲುಕಬೇಕಾಗುತ್ತದೆ.

ದಿವ್ಯಪ್ರಭು ಜಿಲ್ಲಾಧಿಕಾರಿ

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ