250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?

| Published : Nov 13 2025, 03:15 AM IST

ಸಾರಾಂಶ

ರಾಜರಾಜೇಶ್ವರಿ ನಗರ ವಲಯದ ₹250 ಕೋಟಿ ಅಭಿವೃದ್ಧಿ ಕಾಮಗಾರಿಗಳ ಹಗರಣವನ್ನು ಮುಚ್ಚಿ ಹಾಕಲು ಕೆಲವರು ಯತ್ನಿಸಿದ್ದರೂ ಕೂಡ ಮೂಲ ಕಡತಗಳು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿರುವ ಕುತೂಹಲಕಾರಿ ಸಂಗತಿ ನಡೆದಿದೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜರಾಜೇಶ್ವರಿ ನಗರ ವಲಯದ ₹250 ಕೋಟಿ ಅಭಿವೃದ್ಧಿ ಕಾಮಗಾರಿಗಳ ಹಗರಣವನ್ನು ಮುಚ್ಚಿ ಹಾಕಲು ಕೆಲವರು ಯತ್ನಿಸಿದ್ದರೂ ಕೂಡ ಮೂಲ ಕಡತಗಳು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿರುವ ಕುತೂಹಲಕಾರಿ ಸಂಗತಿ ನಡೆದಿದೆ.

ಐದು ವರ್ಷಗಳ ಹಿಂದೆ ಕಾಮಗಾರಿ ನಡೆಸದೆ ಕೋಟ್ಯಂತರ ರು. ಸ್ವಾಹ ಮಾಡಿದ ಕೆಲ ಅಧಿಕಾರಿಗಳು, ಆ ಯೋಜನೆಗೆ ಸಂಬಂಧಿಸಿದ ಕಡತಗಳನ್ನು ತಮ್ಮ ವಲಯದ ಕಚೇರಿಯಲ್ಲಿ ನಾಶಗೊಳಿಸಿ ನಿರಾಳರಾಗಿದ್ದರು. ಆದರೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೇಂದ್ರ ಕಚೇರಿಯಲ್ಲಿ ನಾಶಗೊಳಿಸಿದ್ದ ಕಡತಗಳ ಪ್ರತಿಗಳನ್ನು ಲೋಕಾಯುಕ್ತ ಪೊಲೀಸರು ಹೆಕ್ಕಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆಲ ಅಧಿಕಾರಿಗಳಿಗೆ ಪೊಲೀಸರು ನಿದ್ರಾಭಂಗ ಮಾಡಿದ್ದಾರೆ.

ಕೆಲಸ ಮಾಡದೆ ಹಣ ಗುಳುಂ

2019-20 ಹಾಗೂ 2020-21ರ ಅವಧಿಯಲ್ಲಿ ರಾಜರಾಜೇಶ್ವರಿ ನಗರ ವಲಯದ ಆರು ವಾರ್ಡ್‌ಗಳ ವ್ಯಾಪ್ತಿಯಲ್ಲಿ 250 ಕೋಟಿ ರು. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೆಆರ್‌ಐಡಿಎಲ್ ಹಾಗೂ ಜೆಬಿಎ ರೂಪಿಸಿದ್ದವು. ಈ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಆ ವಲಯದ ಜಂಟಿ ಆಯುಕ್ತರ ಅನುಮೋದನೆ ಪಡೆದು ಮುಖ್ಯ ಎಂಜಿನಿಯರ್ ಉಸ್ತುವಾರಿ ನಡೆಸಿದ್ದರು. ತಮಗೆ ಬೇಕಾದ ಗುತ್ತಿಗೆದಾರರಿಗೆ ಆ ಕಾಮಗಾರಿಗಳು ಸಿಗುವಂತೆ ಸಹ ಅಧಿಕಾರಿಗಳು ನೋಡಿಕೊಂಡಿದ್ದರು. ಆದರೆ ಒಂದು ಕಾಮಗಾರಿ ಸಹ ನಡೆಸದೆ ನಕಲಿ ಬಿಲ್ ತಯಾರಿಸಿ ಹಣವನ್ನು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ನುಂಗಿದ್ದಾರೆ ಎಂಬ ಆರೋಪವಿದೆ. ಇಲ್ಲಿ ಅಧಿಕಾರಿಗಳಿಗೆ ಕೋಟ್ಯಾಂತರ ರು. ಕಿಕ್ ಬ್ಯಾಕ್ ಸಲ್ಲಿಕೆಯಾಗಿರಬಹುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕಡತ ನಾಶ ಮಾಡಿದ್ದ ಎಂಜಿನಿಯರ್‌ಗಳು

ಭವಿಷ್ಯದಲ್ಲಿ ಈ ಅಕ್ರಮ ಬಯಲಾದರೆ ತಮ್ಮ ಕಂಟಕವಾಗಬಹುದು ಎಂದು ಅಂದಾಜಿಸಿ ಕೆಲ ಎಂಜಿನಿಯರ್‌ಗಳು ಜಾಗೃತೆ ವಹಿಸಿದ್ದರು. ಆಗಲೇ ರಾಜರಾಜೇಶ್ವರಿ ನಗರ ವಲಯದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ 250 ಕೋಟಿ ರು. ಮೊತ್ತದ ಯೋಜನೆಯ ಕಾಮಗಾರಿಯ ಕಡತಗಳನ್ನು ಅಧಿಕಾರಿಗಳು ನಾಶಗೊಳಸಿದ್ದರು. ಆದರೆ ಯೋಜನೆಗೆ ಅನುಮೋದನೆ ಪಡೆದ ಬಳಿಕ ಕಾರ್ಯ ಆದೇಶ ಸೇರಿದಂತೆ ಜಿಬಿಎ ಹಾಗೂ ಕೆಆರ್‌ಡಿಎಲ್‌ಗೆ ಕೆಲ ದಾಖಲೆಗಳನ್ನು ಅಧಿಕಾರಿಗಳು ಸಲ್ಲಿಸಿದ್ದರು. ಈಗ ಕಾಮಗಾರಿ ಹಗರಣದ ಕಡತಗಳು ರಾಜರಾಜೇಶ್ವರಿ ನಗರದ ವಲಯದ ಕಚೇರಿಯಲ್ಲಿ ನಾಪತ್ತೆಯಾದರೂ ಸಹ ಜೆಬಿಎ ಹಾಗೂ ಕೆಆರ್‌ಐಡಿಎಲ್‌ ಕಚೇರಿಯಲ್ಲಿ ಪತ್ತೆಯಾಗಿವೆ ಎಂದು ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಈ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಕಾಮಗಾರಿ ನಡೆಸಿದ ಗುತ್ತಿಗೆದಾರರು ಸೇರಿದಂತೆ ಪ್ರತಿಯೊಬ್ಬರ ಪಾತ್ರದ ಬಗ್ಗೆ ವಿವರ ಕಲೆ ಹಾಕಲಾಗುತ್ತಿದೆ. ಈಗಾಗಲೇ ಕೆಲವರು ನಿವೃತ್ತರಾಗಿದ್ದಾರೆ. ಇದುವರೆಗೆ ತನಿಖೆಯಲ್ಲಿ 250 ಕೋಟಿ ರು. ಅಕ್ರಮ ನಡೆದಿರುವುದಕ್ಕೆ ಪೂರಾವೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಭಾವಿ ರಾಜಕಾರಣಿ ಪಾತ್ರದ ಬಗ್ಗೆ ತನಿಖೆ

ಈ ಅಕ್ರಮದ ಹಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಪಾಲು ಸಿಕ್ಕಿರಬಹುದು. ಆದರೆ ಇದುವರೆಗೆ ಆ ಕಿಕ್ ಬ್ಯಾಕ್‌ ಸಂಬಂಧ ಸಾಕ್ಷ್ಯ ಸಿಕ್ಕಿಲ್ಲ. ರಾಜರಾಜೇಶ್ವರಿ ನಗರದ ವಲಯದ ಕಾಮಗಾರಿಯಲ್ಲಿ ಶೇ.30 ರಿಂದ 40 ರಷ್ಟು ಹಣವನ್ನು ಆ ರಾಜಕಾರಣಿ ಪಡೆದಿರುವ ಸಂಶಯವಿದೆ. ಆದರೆ ಯೋಜನೆ ರೂಪಿಸುವ ಹಂತದಿಂದ ಮುಗಿಯುವವರೆಗೆ ಎಲ್ಲ ದಾಖಲೆಗಳಿಗೆ ಅಧಿಕಾರಿಗಳ ಸಹಿ ಇದೆ. ಆ ರಾಜಕಾರಣಿ ಮೌಖಿಕವಾಗಿ ಹೇಳಿದ್ದರೂ ಸಾಕ್ಷ್ಯ ಬೇಕಾಗುತ್ತದೆ. ಆರೋಪಿತ ಅಧಿಕಾರಿಗಳ ವಿಚಾರಣೆ ಬಳಿಕ ಹಗರಣದ ಹಿಂದಿರುವ ಪ್ರಭಾವಿಗಳು ಬೆಳಕಿಗೆ ಬರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.