ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದ ಉಪ್ಪಾರ ಜನಾಂಗದವರಿಗೆ ಸೇರಿದ್ದ 23 ನಿವೇಶನಗಳು ಇನ್ನು ಸಹ ಆರ್‌ಟಿಸಿಯಲ್ಲಿ ನಮೂದಾಗಿದ್ದು, ಇದನ್ನು ಕೂಡಲೇ ರದ್ದುಪಡಿಸಿ ಅಕ್ರಮ ಪರಭಾರೆಯನ್ನು ಜಿಲ್ಲಾಡಳಿತ ತಪ್ಪಿಸಬೇಕೆಂದು ಆಗ್ರಹಿಸಿ, ಜಿಲ್ಲಾ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಉಪ್ಪಾರ ಸಮಾಜದವರು ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಡಳಿತ ಭವನದ ಮುಂದೆ ಜಿಲ್ಲಾ ರೈತ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ನೇತೃತ್ವದಲ್ಲಿ ಬನ್ನಿಸಾರಿಗೆ ಗ್ರಾಮದ ಉಪ್ಪಾರ ಗ್ರಾಮೀಣ ಅಭಿವೃದ್ಧಿ ಸಂಘದ ಪದಾಧಿಕಾರಿಗಳು, ಮಹಿಳೆಯರು ಸಮಾವೇಶಗೊಂಡು ಪ್ರತಿಭಟನಾ ಧರಣಿ ನಡೆಸಿದರು.
ಸ್ಥಳಕ್ಕಾಗಮಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗು ಜಿಲ್ಲಾ ಸರ್ವೇ ಅಧಿಕಾರಿಗಳು ಸಮಸ್ಯೆಯನ್ನು ಆಲಿಸಿ, ತಕ್ಷಣ ಕ್ರಮ ವಹಿಸುವ ಭರವಸೆ ನೀಡಿದರು.ಇದಕ್ಕು ಮುನ್ನಾ ಪ್ರತಿಭಟನಾ ನೇತೃತ್ವ ವಹಿಸಿದ್ದ ಬಸವನಪುರ ರಾಜಶೇಖರ್ ಮಾತನಾಡಿ, ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ಉಪ್ಪಾರ ಜನಾಂಗದ ಹಳೆ ಗ್ರಾಮದ ನಿವೇಶನಗಳನ್ನು ಅಕ್ರಮವಾಗಿ ಆರ್‌ಟಿಸಿ ಕಲಂ ನಲ್ಲಿ ಮುಂದುವರಿದ್ದು, ಇದು ನಿವೇಶನವಾಗಿ ಪರಿವರ್ತನೆಗೊಂಡು ಈ ಸ್ವತ್ತು ನೀಡಿದ್ದರು ಸಹ ಖಾಸಗಿ ವ್ಯಕ್ತಿಯೊಬ್ಬರು ತಮಗೆ ಸೇರಿದ ಜಮೀನು ಎಂದು ಆರ್‌ಟಿಸಿಯನ್ನು ನೀಡಿ, 11ನಕ್ಷೆ ನೀಡುವಂತೆ ಸವೇ ಇಲಾಖೆಗೆ ಅರ್ಜಿ ಸಲ್ಲಿದ್ದಾರೆ. ಇದರಿಂದ 23 ಮಂದಿ ಉಪ್ಪಾರ ಸಮುದಾಯದ ಬಡವರಿಗೆ ಅನ್ಯಾಯವಾಗುತ್ತದೆ. ಈ ಅಕ್ರಮಕ್ಕೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಹಾಗೂ ಶಾಸಕರು ಅಸ್ಪದ ನೀಡಬಾರದು ಎಂದು ಒತ್ತಾಯಿಸಿದರು. 1967-68ನೇ ಸಾಲಿನಲ್ಲಿ ಸುವರ್ಣಾವತಿ-ಚಿಕ್ಕಹೊಳೆ ಡ್ಯಾಂ ಹೊಡೆದು ಪ್ರವಾಹ ಬಂದು ಬನ್ನಿಸಾರಿಗೆಯ ಉಪ್ಪಾರ ಬಡಾವಣೆಯು ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಈ ಪ್ರವಾಹದಲ್ಲಿ ಇಬ್ಬರು ವಯಸ್ಸಾದ ವೃದ್ದರು ಸಹ ನಾಪತ್ತೆಯಾಗಿದ್ದರು. ಸದರಿ ಹಳೆ ಗ್ರಾಮವು ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದ ಪರಿಣಾಮ ಉಪ್ಪಾರ ಸಮಾಜದ 23 ಕುಟುಂಬಗಳು ಕುಣಗಳ್ಳಿ ಗ್ರಾಮದ ಚಾವಡಿಯಲ್ಲಿ ಒಂದು ವರ್ಷ ಆಶ್ರಯ ಪಡೆದುಕೊಂಡಿದ್ದರು. ರಾಜ್ಯ ಸರ್ಕಾರ ಹಾಗೂ ಅಂದಿನ ಶಾಸಕರು ಬನ್ನಿಸಾರಿಗೆ ಗ್ರಾಮದ ಎಲ್ಲೆಗೆ ಸೇರಿದ ಸರ್ಕಾರಿ ಜಮೀನಿನಲ್ಲಿ 23ನಿವೇಶನಗಳನ್ನು ಗುರುತಿಸಿ ಹಂಚಿಕೆ ಮಾಡಿದ್ದರು. ಸುಮಾರು 60 ವರ್ಷಗಳಿಂದಲೂ ವಾಸ ಮಾಡುತ್ತಿದ್ದು, ಈ ಜಮೀನಿನ ವಿರುದ್ದ 2016ರಲ್ಲಿ ಮಲ್ಲಿಕಾರ್ಜುನಸ್ವಾಮಿ ಎಂಬುವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ರಾಜೀ ಸಂಧಾನದ ಮುಖಾಂತರ ನಮ್ಮ ನಿವೇಶನದ ಪಕ್ಕದಲ್ಲಿ 20*160 ಅಡಿಯನ್ನು ಮಲ್ಲಿಕಾರ್ಜುನಸ್ವಾಮಿ ಅವರ ಜಮೀನಿಗೆ ಹೋಗುವ ದಾರಿ ಬಿಟ್ಟಿಕೊಡಲಾಗಿತ್ತು. ಈಗ ಮತ್ತೇ ಮಲ್ಲಿಕಾರ್ಜುನಸ್ವಾಮಿ ನಿಧನದ ಬಳಿಕ ಅವರ ಅಳಿಯಂದಿರಾದ ಬಾಬು ಮತ್ತು ನಟರಾಜು ಹಳೆ ಆರ್.ಟಿ.ಸಿ. ಜಾಗ ನಮ್ಮದು ಎಂದು ಆಸ್ತಿಗೆ 11ಎ ಸ್ಕೆಚ್ ಮಾಡಿಸಿಕೊಂಡು ಪರಾಭಾರೆ ಮಾಡಲು ಮುಂದಾಗಿದ್ದಾರೆ. ತಾಲೂಕು ಆಡಳಿತ 11ಎ ಸ್ಕೆಚ್ ಅನ್ನು ರದ್ದುಪಡಿಸಿ ನಾವು ನಮ್ಮ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಗ್ರಾಮದ ಮುಖಂಡರಾದ ಮಹೇಶ್, ರಾಚಶೆಟ್ಟಿ, ಎಂ. ಶ್ರೀನಿವಾಸ್, ನಂಜುಂಡಸ್ವಾಮಿ, ಸಿದ್ದು, ರಾಜಮ್ಮ, ಸಾವಿತ್ರಿ, ರಾಜಮ್ಮಣಿ, ಶೀಲಾ, ಜಯಮ್ಮ, ಉಮಾ, ಗೌರವಮ್ಮ, ದೊಡ್ಡಮ್ಮ, ಮಹದೇವಶೆಟ್ಟಿ, ಜನಧ್ವನಿ ಸುರೇಶ್ï, ಹೋರಾಟ ಸಮಿತಿಯ ಸೋಮಣ್ಣ, ಮೊದಲಾಧವರು ಇದ್ದರು.