ಕನ್ನಡಪ್ರಭ ವಾರ್ತೆ ಗದಗ
ರಾಮಣ್ಣ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಇರುವ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಗೆ ಮಾಹಿತಿ ಬಂದ ಹಿನ್ನೆಲೆ ಸೆ.16ರಂದು ಶಿರಹಟ್ಟಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸ್ಥಳೀಯವಾಗಿ ಹೊಳೆಇಟಗಿ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಈ ವೇಳೆ ರಾಮಣ್ಣ ಮೂಲತಃ ಹಾವೇರಿ ಜಿಲ್ಲೆಯ ಇಚ್ಚಂಗಿ ಗ್ರಾಮದವರಾಗಿದ್ದು, ಶಿರಹಟ್ಟಿ ತಾಲೂಕಿನ ಕಲ್ಲಾಗನೂರ ಗ್ರಾಮದಲ್ಲಿ ವಾಸವಾಗಿದ್ದರು ಹಾಗೂ ಕಳೆದ ಸುಮಾರು ಎರಡೂವರೆ ವರ್ಷಗಳ ಹಿಂದೆ ಕಾಣೆಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಅವರ ಕಾಣೆಯಾದ ಕುರಿತು ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.
ಈ ಹಿನ್ನೆಲೆ ರಾಮಣ್ಣ ಅವರನ್ನು ಹಿಮಾಚಲ ಪ್ರದೇಶದಿಂದ ಸ್ವಗ್ರಾಮಕ್ಕೆ ಸುರಕ್ಷಿತವಾಗಿ ಕರೆತರುವ ಕುರಿತು ಜಿಲ್ಲಾಧಿಕಾರಿ ಸರ್ಕಾರದ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಇವರನ್ನು ಸಂಪರ್ಕಿಸಿ ಅಗತ್ಯ ಅನುಮತಿ ಪಡೆದಿದ್ದರು. ಸರ್ಕಾರದ ನಿರ್ದೇಶನದಂತೆ ನಿರಾಶ್ರಿತರ ಪರಿಹಾರ ಕೇಂದ್ರ ಧಾರವಾಡದ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ರಚಿಸಲಾಯಿತು. ಕೇಂದ್ರ ಪರಿಹಾರ ಸಮಿತಿ, ಬೆಂಗಳೂರಿನ ಸಹಾಯಕ ಕಾರ್ಯದರ್ಶಿ ಚಂದ್ರಪ್ಪ ಬಿ.ಗೋಕಾಕ ಅವರ ಮುಂದಾಳತ್ವದಲ್ಲಿ ತಂಡವು ರಾಮಣ್ಣ ಅವರನ್ನು ಕರೆತರಲು ಕಾರ್ಯಾಚರಣೆ ಕೈಗೊಂಡಿತು.ತಂಡವು ಸೆ.30ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಿ ಚಂಡಿಗಡ ತಲುಪಿ, ಅಲ್ಲಿನ ಉಪವಿಭಾಗಾಧಿಕಾರಿ ಅವರನ್ನು ಭೇಟಿ ಮಾಡಿ, ಅವರ ಸಹಕಾರದೊಂದಿಗೆ ರಾಮಣ್ಣ ಅವರನ್ನು ಸುಪರ್ದಿಗೆ ಪಡೆದುಕೊಂಡಿತು. ಬಳಿಕ ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಯಿತು.
ಎರಡು ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ರಾಮಣ್ಣ ಅವರನ್ನು ಪತ್ತೆಹಚ್ಚಿ, ಹಿಮಾಚಲ ಪ್ರದೇಶದಿಂದ ಸುರಕ್ಷಿತವಾಗಿ ಜಿಲ್ಲೆಗೆ ಕರೆತಂದು ಕುಟುಂಬಸ್ಥರೊಂದಿಗೆ ಪುನಃ ಸೇರಿಸುವಲ್ಲಿ ಗದಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಹಿಸಿದ ಸಮನ್ವಯದ ಪಾತ್ರ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
4ಜಿಡಿಜಿ11