ಲೋಕಸಭೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧ

KannadaprabhaNewsNetwork |  
Published : Apr 17, 2024, 01:22 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್    | Kannada Prabha

ಸಾರಾಂಶ

ಏ.26ರಂದು ನಡೆಯಲಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ಶಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಚಿತ್ರದುರ್ಗ: ಏ.26ರಂದು ನಡೆಯಲಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ಶಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಉಮೇದುವಾರರಿಗೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾನ ಪೂರ್ವ ಸಿದ್ಧತೆಗಳ ಮಾಹಿತಿ ನೀಡಿದರು. ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲೂಕುಗಳು ಸೇರಿದಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ 8 ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಸರಬರಾಜಾಗಲಿರುವ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತ್ತು ವಿವಿಪ್ಯಾಟ್‍ಗಳ 2ನೇ ಹಂತದ ರ್‍ಯಾಂಡಂಮೈಜೇಶನ್ ಮತ್ತು ಹಂಚಿಕೆ ವಿಧಾನಗಳ ವಿವರಿಸಿದರು.

ಮತಯಂತ್ರಗಳು ಮತಗಟ್ಟೆಗೆ ಹಂಚಿಕೆ ಮಾಡುವ ಕಾರ್ಯ ಏ.25ರಂದು ನಿಯಮಾನುಸಾರ ನಡೆಯಲಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಉಮೇದುವಾರರು ಅಥವಾ ಅವರಿಂದ ನಿಯೋಜಿಸಲಾದ ಸಿಬ್ಬಂದಿ ಖುದ್ದು ಸ್ಥಳದಲ್ಲಿ ಹಾಜರಿದ್ದು, ವೀಕ್ಷಿಸಬಹುದಾಗಿದೆ. ಎಲ್ಲಾ ವಿದ್ಯಮಾನಗಳನ್ನು ಪ್ರತಿ ಮತಗಟ್ಟೆಗಳಿಗೆ ನೇಮಿಸಲಾಗುವ ರಾಜಕೀಯ ಪಕ್ಷಗಳ ಏಜೆಂಟರಿಗೆ ತಿಳಿಸುವಂತೆ ಹಾಗೂ ಯಾವುದೇ ಅಡಚಣೆಗಳಾಗದಂತೆ ನೋಡಿಕೊಳ್ಳಲು ಸೂಚಿಸಿದರು.

2168 ಮತಗಟ್ಟೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವ 2168 ಮತಗಟ್ಟೆಗಳಿಗೆ ಪ್ರತಿ ಕೇಂದ್ರಕ್ಕೆ 2 ಮತಯಂತ್ರದಂತೆ ಒಟ್ಟು 4336 ಮತಯಂತ್ರಗಳನ್ನು ಹಂಚಿಕೆ ಮಾಡಲಾಗುವುದು. ಅಲ್ಲದೇ ತಾಂತ್ರಿಕ ದೋಷ ಮತ್ತಿತರ ತುರ್ತು ಸಂದರ್ಭಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಪರಿಹಾರ ಕ್ರಮವಾಗಿ ಹೆಚ್ಚುವರಿಯಾಗಿ 897 ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ. ಈ ಚುನಾವಣೆಗಾಗಿ ಒಟ್ಟು 5233 ಬ್ಯಾಲೆಟ್ ಯುನಿಟ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಯುನಿಟ್‍ಗೂ ನಂಬರ್‌ಗಳನ್ನು ಹಾಕಲಾಗಿದೆ ಎಂದರು.

85 ವರ್ಷ ಮೇಲ್ಪಟ್ಟ ವಯಸ್ಕರ ಕೋರಿಕೆ ಮತದಾನಕ್ಕೆ ಮಂಗಳವಾರವೇ ಅಂತಿಮದಿನವಾಗಿದೆ. ಈಗಾಗಲೇ ಕೋರಿಕೆ ಸಲ್ಲಿಸಿದ ವಿಕಲಚೇತನರೂ ಕೂಡ ಮನೆಯಲ್ಲಿಯೇ ಮತ ಚಲಾಯಿಸಲು ಅನುಮತಿ ನೀಡಲಾಗಿದೆ. ಅಗತ್ಯ ಸೇವೆಗಳಿಗೆ ನಿಯೋಜಿತ ಮತದಾರರು ಮತ ಚಲಾಯಿಸಲು ಜಿಲ್ಲೆಯ ತಹಶೀಲ್ದಾರರ ಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅರ್ಹರು ಏ.19, 20 ಮತ್ತು 21ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗಾಗಿ ಮತಚಲಾಯಿಸಬಹುದಾಗಿದೆ ಎಂದರು.

ಪ್ರಸಕ್ತ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರ ಅನುಕೂಲಕ್ಕಾಗಿ ಮತಗಟ್ಟೆ ಗುರುತಿನ ಚೀಟಿಗಳನ್ನು ವಿತರಿಸುವ ಕಾರ್ಯ ಜಿಲ್ಲೆಯಾದ್ಯಂತ ಇಂದಿನಿಂದ ಆರಂಭಗೊಳ್ಳಲಿದೆ. ಖಾಸಗಿಯವರು ವಿತರಿಸುವ ಪಕ್ಷದ ಗುರುತು ಚಿಹ್ನೆಗಳುಳ್ಳ ಚೀಟಿಗಳನ್ನು ಮತಗಟ್ಟೆಯೊಳಗೆ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ವಿಶೇಷವಾಗಿ ಜಿಲ್ಲಾ ಚುನಾವಣಾ ಶಾಖೆಯಿಂದ ವಿತರಿಸಲಾಗುವ ಗುರುತಿನ ಚೀಟಿಗಳಲ್ಲಿ ಮತಗಟ್ಟೆ ವಿವರವಾದ ಮಾಹಿತಿ ಒದಗಿಸುವ ಕ್ಯೂಆರ್ ಕೋಡನ್ನು ನಮೂದಿಸಲಾಗಿದೆ. ಈ ಕ್ಯೂಆರ್ ಕೋಡನ್ನು ಮತದಾರರು ಬಳಸಿಕೊಳ್ಳಬಹುದಾಗಿದೆ ಎಂದರು.

ಚುನಾವಣಾ ವೀಕ್ಷಕ ಮನೋಹರ ಮರಾಂಡಿ ಮಾತನಾಡಿ, ಚುನಾವಣೆ ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಪ್ರಸಕ್ತ ಚುನಾವಣೆಯಲ್ಲಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಉಮೇದುವಾರರು, ಅವರ ಪ್ರತಿನಿಧಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!