ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮುಖಂಡರಾದ ಎಂ.ರಾಮಚಂದ್ರ ಹಾಗೂ ನಿಜಗುಣರಾಜು ಮಾತನಾಡಿ, ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ನೀಡುವ ಮೂಲಕ ಮುಸ್ಲಿಂಮರಿಗೆ ಮೀಸಲಾತಿ ಪ್ರಸ್ತಾಪವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ತನ್ನ ಮತಬ್ಯಾಂಕ್ ರಾಜಕೀಯದ ಹಿತಾಸಕ್ತಿಗಾಗಿ ಯಾವುದೇ ಹಂತಕ್ಕೂ ಹೋಗಬಹುದು ಎಂಬುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಪಕ್ಷವು ಸಂವಿಧಾನದ ರಕ್ಷಕ ಎಂದು ಹೇಳಿಕೊಳ್ಳುತ್ತಿದ್ದು, ಅದರ ನಿಜ ಬಣ್ಣ ಈಗ ಬಯಲಾಗಿದೆ ಎಂದರು.ಧರ್ಮಾಧಾರಿತ ಮೀಸಲಾತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿಸಿದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನವನ್ನು ಗೌರವಿಸುತ್ತಿದ್ದರೆ, ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸಿ ಸಂಪುಟದಿಂದ ವಜಾ ಮಾಡಬೇಕು ಎಂದರು. ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಬಿಜೆಪಿ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ಹಾಗೂ ಸಂವಿಧಾನದ ಪುಸ್ತಕವನ್ನು ಹಿಡಿದು ಅಲ್ಲಾಡಿಸುವ ರಾಹುಲ್‌ಗಾಂಧಿ ಈಗ ಏನು ಹೇಳುತ್ತಾರೆ, ನಿಜವಾಗಲೂ ೧೮೨ ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿರುವರು ಕಾಂಗ್ರೆಸ್‌ನವರು ಎಂದರು.
ರಾಜ್ಯದಲ್ಲಿ ಮುಸ್ಲಿಂಮರಿಗೆ ಸರಕಾರಿ ಕಾಮಗಾರಿಯಲ್ಲಿ ಶೇ.೪ರಷ್ಟು ಮೀಸಲಾತಿ ಮತ್ತು ೧೮ ಜನ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದನ್ನು ರದ್ದು ಪಡಿಸಬೇಕು. ಸರಕಾರಿ ಕಾಮಗಾರಿಗಳಲ್ಲಿ ಮುಸ್ಲಿಂಮರಿಗೆ ಮೀಸಲಾತಿ ಕಲ್ಪಿಸಿರುವುದು ಅಸಂವಿಧಾನಿಕ ನಡೆಯಾಗಿದೆ ಎಂದು ಆರೋಪಿಸಿದರು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಶೋಷಿತ ವರ್ಗದವರಿಗೆ ಮೀಸಲಾತಿಯನ್ನು ಸಂವಿಧಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ, ಇದರಲ್ಲಿ ಮುಸ್ಲಿಂರ ಕೆಲ ಪಂಗಡಗಳು ಸೇರಿವೆ, ಅದು ಬಿಟ್ಟು ಧರ್ಮಾಧಾರಿತ ಮೀಸಲಾತಿ ನೀಡಿರುವದು ಆತ್ಯಂತ ಖಂಡನೀಯ ಎಂದರು.ಹಾಲಿನ ದರ ಏರಿಕೆ, ವಿದ್ಯುತ್ ದರ ಏರಿಕೆ, ಬಸ್ ಪ್ರಯಾಣ ದರ ಏರಿಕೆ, ಸ್ಟಾಂಪ್ ಶುಲ್ಕ ಏರಿಕೆ, ಮದ್ಯದ ದರ ಏರಿಕೆಯನ್ನು ಮಾಡಿದೆ. ದಿನೇದಿನೇ ಹೊಸ ಹೊಸ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಈ ಸರ್ಕಾರದ ನಡೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಲಿಪರ ಸಂಘಟನೆಗಳು, ಪ್ರಗತಿಪರರು ಈ ಹೇಳಿಕೆಯನ್ನು ಖಂಡಿಸಬೇಕು ಎಂದರು. ಸಂವಿಧಾನ ವಿರೋಧಿ ಹೇಳಿಕೆ ನೀಡುವ ಪಕ್ಷದಲ್ಲಿ ನಾನು ಇರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಶಾಸಕ ಎ.ಆರ್ ಕೃಷ್ಣಮೂರ್ತಿ ಈಗ ಯಾವಾಗ ರಾಜೀನಾಮೆ ನೀಡುತ್ತಾರೆ ಎಂದು ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ವ್ಯಂಗ್ಯವಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭೇಂದ್ರಪ್ಪ, ಹೊನ್ನೂರು ಮಹಾದೇವಸ್ವಾಮಿ, ನಗರಸಭಾಧ್ಯಕ್ಷ ಸುರೇಶ್, ಆರ್ ಸುಂದರ್, ರಾಜ್ಯ ಯುವ ಮೋರ್ಚಾದ ಪ್ರಣಯ್, ಮಂಡಲ ಅಧ್ಯಕ್ಷರಾದ ಶಿವರಾಜು ಅರಕಲವಾಡಿ ಮಹೇಶ್. ಹನೂರು ವೃಷಬೇಂದ್ರಸ್ವಾಮಿ, ಅರಕಲವಾಡಿ ನಾಗೇಂದ್ರ, ಟಗರಪುರ ರೇವಣ್ಣ, ಮಲ್ಲೇಶ್ ನಾಯಕ್, ಎಸ್ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಮೂಡಳ್ಳಿ ಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಎಸ್ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ್, ನಾಗರಾಜು, ಶಂಕರ್ ನಾಯಕ್, ಚಂದ್ರಶೇಖರ್, ನವೀನ್ ಮೌರ್ಯ, ಹುಲ್ಲಿನ ಶಿವಣ್ಣ ರಾಮ ಸಮುದ್ರ ವೀರೇಂದ್ರ, ಮಾಧ್ಯಮ ಪ್ರಮುಖ್ ಮಂಜುನಾಥ್, ಶಿವಣ್ಣ ನಲ್ಲೂರು ಪರಮೇಶ್ ಕೆರಳ್ಳಿ ಮಹಾದೇವಸ್ವಾಮಿ, ಜಯಸುಂದರ್, ಆನಂದ್ ಭಗಿರಥ ಬಾಲಸುಬ್ರಮಣ್ಯಂ, ಪ್ರಗತಿಪರ ಸಂಘಟನೆಯ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಕಿಲಗೆರೆ ಬಸವರಾಜ್, ಬೇಡರಪುರ ಬಸವಣ್ಣ, ನವೀನ್ ಮೌರ್ಯ, ಹೊಂಗನೂರು ಮಹಾದೇವಸ್ವಾವಿ, ಕೂಡ್ಲೂರು ಶ್ರೀಧರಮೂರ್ತಿ, ಕೂಸಣ್ಣ ಮಹೇಶ್, ಲೋಕೇಶ್ ಜತ್ತಿ, ಬುಲೆಟ್ ಇತರರು ಭಾಗವಹಿಸಿದ್ದರು.