ಕನ್ನಡಪ್ರಭ ವಾರ್ತೆ ಧಾರವಾಡ
ವಿದ್ಯಾಕಾಶಿ ಹೆಸರಿಗೆ ಅನ್ವರ್ಥಕವಾಗಿರುವ ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕ ಬದಲಾವಣೆ ಹಾಗೂ ಸುಧಾರಣೆ ತರಲು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಮತ್ತು ಮಕ್ಕಳಲ್ಲಿನ ಕಲಿಕಾ ಶಕ್ತಿಯನ್ನು ಪ್ರೋತ್ಸಾಹಿಸಲು ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಮಿಷನ್ ವಿದ್ಯಾಕಾಶಿ ಯೋಜನೆ ಯಶಸ್ವಿಗೆ ಎಲ್ಲರೂ ಕೈ ಜೊಡಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಿಷನ್ ವಿದ್ಯಾಕಾಶಿ 2024-25 ಯೋಜನೆಯ ಕುರಿತು ಜರುಗಿದ ಶಿಕ್ಷಣ ತಜ್ಞರ, ಶಾಲಾ ಶಿಕ್ಷಣ ಇಲಾಖೆ ಮತ್ತು ಡಯಟ್ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಮಿಷನ್ ವಿದ್ಯಾಕಾಶಿ ಯೋಜನೆಯಿಂದ ಜಿಲ್ಲೆಯ ಸಮಗ್ರ ಶೈಕ್ಷಣಿಕ ಬದಲಾವಣೆಗೆ ಹಾಗೂ ಸುಧಾರಣೆಗೆ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಶಿಕ್ಷಣ ತಜ್ಞ, ಹಿರಿಯ ವಿಜ್ಞಾನಿ ಪ್ರೊ. ಎಸ್.ಎಂ. ಶಿವಪ್ರಸಾದ ನೇತೃತ್ವದ ತಂಡವು ಮಿಷನ್ ವಿದ್ಯಾಕಾಶಿ ಯಶಸ್ವಿ ಅನುಷ್ಠಾನಕ್ಕೆ ಅಗತ್ಯವಿರುವ ಸಲಹೆ, ಮಾರ್ಗದರ್ಶನದ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಕ್ರಿಯಾಶೀಲವಾಗಿ ಓದು, ಬರಹ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಮಿಷನ್ ವಿದ್ಯಾಕಾಶಿಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕ ಸಮೂಹದ ಕಲಿಕಾ ಕೌಶಲ್ಯ ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದರು.ಶಿಕ್ಷಣ ತಜ್ಞ ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವು ಎಲ್ಲ ಪ್ರೌಢಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ಆಗಬೇಕು ಮತ್ತು ರಾಜ್ಯಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿಯ ನೂರು ರ‍್ಯಾಂಕ್‌ಗಳಲ್ಲಿ ಕನಿಷ್ಠ 30 ರ‍್ಯಾಂಕ್ ನಮ್ಮ ಜಿಲ್ಲೆಗೆ ಬರಬೇಕು. ಆ ನಿಟ್ಟಿನಲ್ಲಿ ನಾವೇಲ್ಲರೂ ಕಠಿಣ ಪರಿಶ್ರಮ ಹಾಕಬೇಕು ಎಂದರು.
ವಿದ್ಯಾರ್ಥಿ ಮತ್ತು ಶಿಕ್ಷಕರ ಕಲಿಕಾ ಸಾಮರ್ಥ್ಯ, ಕಲಿಸುವ ಕೌಶಲ್ಯ, ವಿಷಯ ಜ್ಞಾನ ಮತ್ತು ಅವರ ಒಳಗೊಳ್ಳುವಿಕೆ ಗುರುತಿಸಲು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಕಾರ್ಯ ಯಶಸ್ವಿಯಾಗಬೇಕಾದರೆ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಒಂದು ಯಂತ್ರದ ತರಹ ಕೆಲಸ ಮಾಡಬೇಕೆಂದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಸ್ವಾಗತಿಸಿದರು. ಡಯಟ್ ಅಧಿಕಾರಿಗಳು, ಹಿರಿಯ ಉಪನ್ಯಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ತಜ್ಞರು ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಸಲಹೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನೋಡಲ್ ಅಧಿಕಾರಿ ಡಾ. ರವಿಕುಮಾರ ಬಾರಾಟಕ್ಕೆ ವಂದಿಸಿದರು.