ಚೆಕ್ ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork | Published : Mar 21, 2024 1:00 AM

ಸಾರಾಂಶ

ದೇವಿರಹಳ್ಳಿ ಗೇಟ್ ಬಳಿಯ ಈ ಭಾಗವು ಮಂಡ್ಯ ಮತ್ತು ರಾಮನಗರ ಜಿಲ್ಲಾ ಗಡಿ ಪ್ರದೇಶ ಆಗಿದೆ. ಮಂಡ್ಯ ಜಿಲ್ಲೆಯೊಳಗೆ ಬರುವ ಎಲ್ಲ ವಾಹನಗಳ ಸಂಖ್ಯೆ ಪಡೆದು ಮಾಹಿತಿ ಲಾಗ್ ಪುಸ್ತಕದಲ್ಲಿ ನೋಂದಾಯಿಸಿಕೊಳ್ಳಬೇಕು. ಚುನಾವಣೆ ಕಾರ್ಯ ಚಟುವಟಿಕೆಗಳು ಮುಗಿಯುವವರೆಗೂ ಯಾವುದೇ ರೀತಿಯ ಲೋಪ ದೋಷಗಳು ಆಗದಂತೆ ಕಟ್ಟೆಚ್ಚರ ವಹಿಸಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್‌ನಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮೀಪದ ದೇವಿರಹಳ್ಳಿ ಗೇಟ್ ಬಳಿ ನಿರ್ಮಿಸಿರುವ ಚುನಾವಣಾ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ, ಸಿಬ್ಬಂದಿಗೆ ಸಲಹೆ ಸೂಚನೆ ನೀಡಿದರು.

ಈ ಭಾಗವು ಮಂಡ್ಯ ಮತ್ತು ರಾಮನಗರ ಜಿಲ್ಲಾ ಗಡಿ ಪ್ರದೇಶ ಆಗಿದೆ. ಜಿಲ್ಲೆಯೊಳಗೆ ಬರುವ ಎಲ್ಲ ವಾಹನಗಳ ಸಂಖ್ಯೆ ಪಡೆದು ಮಾಹಿತಿ ಲಾಗ್ ಪುಸ್ತಕದಲ್ಲಿ ನೋಂದಾಯಿಸಿಕೊಳ್ಳಬೇಕು. ಚುನಾವಣೆ ಕಾರ್ಯ ಚಟುವಟಿಕೆಗಳು ಮುಗಿಯುವವರೆಗೂ ಯಾವುದೇ ರೀತಿಯ ಲೋಪ ದೋಷಗಳು ಆಗದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಮಾರ್ಗದರ್ಶನ ನೀಡಿದರು.

ಹಲಗೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿರುವ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಮತದಾನ ಕೇಂದ್ರ, ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಮತದಾನ ಕೇಂದ್ರದಲ್ಲಿ ಇಳಿಜಾರು (ರ್ಯಾಂಪ್) ಹಾಳಾಗಿದೆ. ದುರಸ್ತಿಗೊಳಿಸಲು ಕ್ರಮವಹಿಸಿ ಎಂದು ಸೂಚನೆ ನೀಡಿದರು.

ಈ ವೇಳೆ ಜಿಲ್ಲಾ ಎಸ್ಪಿ ಎನ್.ಯತೀಶ್, ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್, ತಹಸೀಲ್ದಾರ್ ಕೆ.ಎನ್.ಲೋಕೇಶ್, ಎನ್.ಎಚ್ - 209 ವಿಶೇಷ ಭೂ ಸ್ವಾಧೀನ ಅಧಿಕಾರಿ ನಯಿದಾ ಜಮ್ ಜಮ್, ಪಿಡಿಓ ವಿಜಯ್ ಕುಮಾರ್, ವಿ.ಎ. ಸೋಮಶೇಖರ್ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.

ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿ: ನಹೀದಾ ಜಮ್‌ಜಮ್‌

ಕನ್ನಡಪ್ರಭ ವಾರ್ತೆ ಮಳವಳ್ಳಿಬಾರ್ ಮತ್ತು ಪ್ರೀಟಿಂಗ್ ಪ್ರೇಸ್ ಮಾಲೀಕರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಾಗಿ ಪಾಲನೆ ಮಾಡಿ ಎಚ್ಚರಿಕೆ ವಹಿಸಬೇಕು ಎಂದು ಸಹಾಯಕ ಚುನಾವಣಾ ಅಧಿಕಾರಿ ನಹೀದಾ ಜಮ್‌ಜಮ್‌ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಬಾರ್ ಮತ್ತು ಪ್ರೀಟಿಂಗ್ ಪ್ರೇಸ್ ಮಾಲೀಕರ ಸಭೆ ನಡೆಸಿ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿಂತೆ ಜಾರಿಯಲ್ಲಿದೆ. ಬಾರ್ ಮಾಲೀಕರು ನಿಯಮಾನುಸಾರ ಮದ್ಯ ಮಾರಾಟ ಮಾಡಬೇಕು. ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಹೆಚ್ಚುವರಿ ಮದ್ಯಮಾರಾಟಕ್ಕೆ ಕಡಿವಾಣ ಹಾಕುಬೇಕು. ನಿಮಯ ಉಲ್ಲಂಘೀಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಪ್ರೀಟಿಂಗ್ ಪ್ರೇಸ್ ಮಾಲೀಕರು ಸರ್ಕಾರ ನಿಗಧಿಪಡಿಸಿದ ದರದಲ್ಲಿಯೇ ಭಿತ್ತಿ ಪತ್ರಗಳನ್ನು ಮುದ್ರಿಸಬೇಕು. ಪರಿಶೀಲನೆ ವೇಳೆ ಎಷ್ಟು ಲೆಕ್ಕ ತೋರಿಸುತ್ತಾರೋ ಅಷ್ಟೇ ಪತ್ರಗಳನ್ನು ಮುದ್ರಿಸಿರಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಹಕಾರ ನೀಡಬೇಕೆಂದು ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ಕೆ.ಎನ್ ಲೊಕೇಶ್, ಅಬಕಾರಿ ಇಲಾಖೆ ಇನ್ಸ್ ಪೆಕ್ಟರ್ ರಾಜೇಶ್ ಸೇರಿದಂತೆ ಬಾರ್ ಹಾಗೂ ಪ್ರೀಟಿಂಗ್ ಪ್ರೇಸ್ ಮಾಲೀಕರು ಇದ್ದರು.

Share this article