ಕಾರವಾರ:
ಜೋಯಿಡಾದ ಕ್ಯಾಸಲ್‌ರಾಕ್ ಹೋಬಳಿಯ ಬಜಾರಕುಣಂಗ ಗ್ರಾಮ ಪಂಚಾಯಿತಿಯ ಗ್ರಾಮಸ್ಥರ ವಿವಿಧ ಸಮಸ್ಯೆ ಆಲಿಸಿ, ಆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಉದ್ದೇಶದಿಂದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ಜನತಾ ದರ್ಶನ ಕಾರ್ಯಕ್ರಮ ಡಿ. ೧೯ರಂದು ಅಸುಳ್ಳಿ ಗ್ರಾಮದ ಗವಳಾದೇವಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.ಬಜಾರಕುಣಂಗ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರಮುಖ ಸಮಸ್ಯೆಗಳಾದ ಮಾಲ್ಕಿ ಜಮೀನಿನಲ್ಲಿ ಬೆಳೆದ ಗಿಡ-ಮರ ಕಟಾವು ಮಾಡಲು ಹಾಗೂ ಕುಂಬ್ರಿ ಜಮೀನಿನಲ್ಲಿ ಸಾಗುವಳಿ ಮಾಡಲು ಅನುಮತಿ ನೀಡುವುದು. ಬಜಾರಕುಣಂಗ ಮುಖ್ಯ ರಸ್ತೆಯಿಂದ ಡಿಗ್ಗಿ ಹೋಗುವ ರಸ್ತೆಗೆ ಘಟ್ಟಾವ ಹಳ್ಳಕ್ಕೆ ರಸ್ತೆ ನಿರ್ಮಿಸುವುದು, ಅವಶ್ಯವಿರುವ ಮುಖ್ಯ ರಸ್ತೆ/ಸೇತುವೆ ಮತ್ತು ಮೂಲಭೂತ ಸೌಕರ್ಯ, ಡಿಗ್ಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ವಸತಿಗಾಗಿ ವಸತಿ ಮನೆ ಮಂಜೂರಿ ಮಾಡುವುದು, ಕರ‍್ಟೋಳ್ಳಿಯಿಂದ ಡಿಗ್ಗಿ ವರೆಗೆ ರಸ್ತೆ ಡಾಂಬರಿಕರಣ, ಬಜಾರಕುಣಂಗದಿಂದ ಡಿಗ್ಗಿ ಹೋಗುವ ಮುಖ್ಯ ರಸ್ತೆ ಡಾಂಬರಿಕರಣ, ಧುದಮಾಳ (ಸಕಲವಾಡಾ) ಅಂಗನವಾಡಿ ಶಾಲೆ ಮಂಜೂರಿ, ಡಿಗ್ಗಿ ವೈಲ್ ವಾಡ ಗ್ರಾಮದಿಂದ ಶಾಲೆಗೆ ಬರುವ ದಾರಿಯಲ್ಲಿನ ಸೇತುವೆ ವಿಸ್ತಾರ, ಎಲ್ಲಾ ಹಳ್ಳಿಗಳ ರಸ್ತೆಯ ನಕಾಶೆ ನೀಡುವುದು, ಕರ‍್ಟೋಳ್ಳಿಯಿಂದ ಪಣಸಗಾಳಿ ಡಿಗ್ಲಿ ವರೆಗೆ ರಸ್ತೆ ಡಾಂಬರಿಕರಣ, ಗೌಳಾದೇವಿ ಮಾಯರೆ ರಸ್ತೆಗೆ ಸೇತುವೆ ನಿರ್ಮಾಣ, ಕಾಳಿ ಮೈದಾನದಲ್ಲಿ ಸಭಾಭವನ, ಗೌಳಾದೇವಿ ಕೆರೆ ಅಭಿವೃದ್ಧಿ, ಡಿಗ್ಗಿಯಿಂದ ಬೊಂಡೆಲಿಗೆ ಹೋಗುವ ಹಳ್ಳಕ್ಕೆ ಸೇತುವೆ ನಿರ್ಮಾಣ, ಡಿಗ್ಗಿ ಗ್ರಾಮದ ಸಕಿಪ್ರಾ ಕನ್ನಡ ಶಾಲೆಗೆ ಮೂಲಸೌಕರ್ಯ ಕುರಿತಂತೆ ಗ್ರಾಮದ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿನ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳದಲ್ಲೇ ಹಾಜರಿದ್ದು, ಗ್ರಾಮಸ್ಥರ ಬಹುಕಾಲದ ಸಮಸ್ಯೆಗಳಿಗೆ ಅಗತ್ಯ ಪರಿಹಾರ ಒದಗಿಸಲಿದ್ದಾರೆ.ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಮನವಿಗಳನ್ನು ಆದ್ಯತೆಯ ನೆಲೆಯಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ಹಿಂದೆ ಬನವಾಸಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಶೇ. ೯೪ರಷ್ಟು ವಿಲೇವಾರಿ ಮಾಡಲಾಗಿದೆ. ಎಲ್ಲ ಅಧಿಕಾರಿಗಳು ಈ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿರುವ ತಮ್ಮ ಇಲಾಖೆ ವ್ಯಾಪ್ತಿಯ ಸಮಸ್ಯೆಗಳನ್ನು ಮೊದಲೇ ಪರಿಶೀಲಿಸಿ, ಅವುಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಮಂಜೂರು ಮಾಡುವಂತೆ ಹಾಗೂ ಜನತಾ ದರ್ಶನದ ಸದುದ್ದೇಶವನ್ನು ಕಾರ್ಯಗತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.