ಭ್ರಷ್ಟಾಚಾರ ತಡೆಗಟ್ಟಲು ಜನಜಾಗೃತಿ ಅಗತ್ಯ

KannadaprabhaNewsNetwork | Published : Oct 29, 2024 12:58 AM

ಸಾರಾಂಶ

ಭ್ರಷ್ಟಾಚಾರದ ಅನನುಕೂಲಗಳ ಬಗ್ಗೆ ಶಾಲಾ ಕಾಲೇಜು ಹಾಗೂ ಹಾಸ್ಟೆಲ್ ಗಳಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಾಗೂ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಿಕೆಯ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರದ ನೀತಿ, ನಿಯಮಗಳು, ಕಾಯ್ದೆ, ಸುತ್ತೋಲೆಗಳು ಎಲ್ಲವನ್ನು ಪಾಲನೆ ಮಾಡಿಕೊಂಡು ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸುವುದು ಆಡಳಿತ ವರ್ಗದ ಆದ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಲೋಕಾಯುಕ್ತ ಕಚೇರಿಯಿಂದ ಹಮ್ಮಿಕೊಂಡಿದ್ದ ‘ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನತೆ ಜಾಗೃತರಾಗಬೇಕು

ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ದಿಗೆ ಭ್ರಷ್ಟಾಚಾರ ಅಡಚಣೆಯ ಮಾಡುತ್ತದೆ. ಭ್ರಷ್ಟಾಚಾರ ತಡೆಯಲು ಸಾರ್ಜನಿಕರೆಲ್ಲರೂ ಜಾಗೃತರಾಗಿ ಭ್ರಷ್ಟಾಚಾರದಲ್ಲಿ ತೊಡಗುವರ ವಿರುದ್ಧ ಸಂಬಂಧಪಟ್ಟ ಸಕ್ಷಮಗಳಿಗೆ, ಮೇಲಧಿಕಾರಿಗಳಿಗೆ ದೂರು ಕೊಡಬೇಕು . ಭ್ರಷ್ಟಾಚಾರದ ಅನನುಕೂಲಗಳ ಬಗ್ಗೆ ಶಾಲಾ ಕಾಲೇಜು ಹಾಗೂ ಹಾಸ್ಟೆಲ್ ಗಳಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಾಗೂ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಿಕೆಯ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದರು.

ಲೋಕಾಯುಕ್ತಕ್ಕೆ ದೂರು ನೀಡಿ

ಸಾರ್ವಜನಿಕರಿಗೆ ನವೆಂಬರ್ 3 ರ ವರೆಗೆ ಭ್ರಷ್ಟಾಚಾರ ನಿರ್ಮೂಲನೆಯ ಅರಿವು ಮತ್ತು ಜಾಗೃತಿಯನ್ನು ಮೂಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ, ಅಕ್ರಮ ಆಸ್ತಿ ಸಂಪಾದನೆ, ಅರ್ಜಿಗಳ ವಿಲೇವಾರಿ ಮಾಡುವಲ್ಲಿ ವಿಳಂಬ, ಸರ್ಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಇತರೆ ಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಕರ್ನಾಟಕ ಲೋಕಾಯುಕ್ತ, ಚಿಕ್ಕಬಳ್ಳಾಪುರ ಜಿಲ್ಲೆ ರವರಿಗೆ ದೂರು ನೀಡಲು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು .

ಪ್ರತಿಜ್ಞಾವಿಧಿ ಬೋಧನೆ

ಅರಿವು ಸಪ್ತಾಹದ ಅಂಗವಾಗಿ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳು,ಸಿಬ್ಬಂದಿಗೆ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಬೇಕು ಎಂದು ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಕರಪತ್ರಗಳು, ಭಿತ್ತಿ ಪತ್ರಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಚಿಕ್ಕಬಳ್ಳಾಪುರದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆಂಟೋನಿ ಜಾನ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Share this article