ತಹಸೀಲ್ದಾರ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮಕೈಗೊಳ್ಳಲಿ

KannadaprabhaNewsNetwork |  
Published : Jan 22, 2025, 12:30 AM IST
ಮುಂಡರಗಿ ತಹಸೀಲ್ದಾರ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಸಂವಿಧಾನದ ನಿಯಮಾವಳಿ ಗಾಳಿಗೆ ತೂರಿದ ತಹಸೀಲ್ದಾರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು

ಮುಂಡರಗಿ: ರಾಷ್ಟ್ರೀಯ ಹಬ್ಬ ಹಾಗೂ ಸಂತರು, ಶರಣರು, ಮಹಾತ್ಮರ ಜಯಂತಿಗಳಲ್ಲಿ ನಿರಂತರವಾಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಹಾಗೂ ಜನಪ್ರತಿನಿಧಿಗಳನ್ನು ತಹಸೀಲ್ದಾರ ಆಹ್ವಾನಿಸದೇ ಕಾರ್ಯಕ್ರಮಗಳಿಗೆ ನಿರ್ಲಕ್ಷಿಸುತ್ತಾ ಬಂದಿದ್ದು, ಜಿಲ್ಲಾಧಿಕಾರಿಗಳು ಅವರ‌ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಒತ್ತಾಯಿಸಿದರು.

ಪಟ್ಟಣದ ತಹಸೀಲ್ದಾರ ಕಚೇರಿ ಸಭಾಭವನದಲ್ಲಿ ಮಂಗಳವಾರ ತಾಲೂಕಾಡಳಿತದಿಂದ ಜರುಗಿದ ನಿಜಶರಣ ಅಂಬಿಗರ ಚೌಡಯ್ಯ ದಿನಾಚರಣೆ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡು ಮಾತನಾಡಿದರು.

ಅಂಬಿಗರ ಚೌಡಯ್ಯ ತಮ್ಮ ವಚನದಲ್ಲಿ ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು. ನಂಬಿದರೆ ಒಂದೇ ಹುಟ್ಟಲ್ಲಿ ಕಡೆಯ ಹಾಯಿಸುವೆನು ಎಂದು ಹೇಳಿದ್ದಾರೆ. ಅಂತಹ ಚೌಡಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಕಂದಾಯ ಇಲಾಖೆ ಹೊರತು ಪಡಿಸಿ ಉಳಿದ್ಯಾವ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂವಿಧಾನದ ನಿಯಮಾವಳಿ ಗಾಳಿಗೆ ತೂರಿದ ತಹಸೀಲ್ದಾರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.

ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಚೌಡಯ್ಯ ನದಿಯಲ್ಲಿ ದೋಣಿ ಸಾಗಿಸಿ ನದಿ ದಾಟಿಸುವ ಅಂಬಿಗರ‌ ಕಾರ್ಯ ಮಾಡುತ್ತಿದ್ದರು. ಅಂತಹ ಶರಣರ ಜಯಂತಿಯನ್ನು ತಾಲೂಕಾಡಳಿತ ನಿರ್ಲಕ್ಷಿಸುತ್ತಿದೆ. ಮುಂಡರಗಿ ಕ್ಷೇತ್ರ ವಿಂಗಡೆಯಾದ ನಂತರ‌ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಹೀಗೆ ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಾ ಹೋದರೆ ತಕ್ಕ ಪ್ರತಿಫಲ ಅನುಭವಿಸುತ್ತಾರೆ. ಇಲ್ಲಿನ ತಹಸೀಲ್ದಾರರು ಪುರಸಭೆ ಉಪಾಧ್ಯಕ್ಷರ ಹುದ್ದೆ ಸಾಂವಿಧಾನಿಕ ಹುದ್ದೆಯಲ್ಲ ಎನ್ನುತ್ತಿದ್ದಾರೆ. ಜಿಲ್ಲಾಧಿಕಾರಿ ಈ ಕುರಿತು ತಿಳಿವಳಿಕೆ ನೀಡಬೇಕು ಎಂದರು.

ಆರ್.ಬಿ. ಮುಳ್ಳೊಳ್ಳಿ, ಫಕ್ಕೀರೇಶ ಹುಲ್ಯಾಳ ಮಾತನಾಡಿ, ಅಂಬಿಗರ ಚೌಡಯ್ಯ ನೇರ ಹಾಗೂ ನಿಷ್ಠುರ ವಚನಕಾರರಾಗಿದ್ದರು. ಅವರ ವಚನದ ನಿಜ ಅರ್ಥ ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಲಕ್ಷ್ಮಣ ಕೋಗನೂರು, ನಾಗರಾಜ ಕೊರ್ಲಹಳ್ಳಿ, ಮಂಜುನಾಥ ರಾಟಿ, ರಾಮಚಂದ್ರಪ್ಪ ಕುಕನೂರು, ಕಿರಣಕುಮಾರ ರಾಟಿ ಹಾಗೂ ಸಿಬ್ಬಂದಿ ಇದ್ದರು.

ಗ್ರೆಡ್ 2 ತಹಸೀಲ್ದಾರ್ ಕೆ.ರಾಶಾ ಅಧ್ಯಕ್ಷತೆ ವಹಿಸಿದ್ದರು. ಉಪತಹಸೀಲ್ದಾರ ಪಿ.ಬಿ. ಕನ್ನೂರು ಸ್ವಾಗತಿಸಿ ನಿರೂಪಿಸಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು