ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಮಾಜವಾದಿ ಚಿಂತಕ ಹಾಗೂ ಹೋರಾಟಗಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಜನ್ಮದಿನದ ಅಂಗವಾಗಿ ಇದೇ ಫೆ. 13ರಂದು ಮೈಸೂರಿನ ಟೌನ್ ಹಾಲ್ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ರೈತರ ಯೋಜನೆಗಳನ್ನು ರೂಪಿಸಲು ಆಗ್ರಹಿಸಿ ಜಿಲ್ಲಾ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಆಡಳಿತ ಸರ್ಕಾರಗಳು ತಂದಿರುವ ಹೊಸ ಆರ್ಥಿಕ ನೀತಿ, ಉದಾರಿಕರಣ ನೀತಿ, ಮುಕ್ತ ಮಾರುಕಟ್ಟೆ ನೀತಿಯಿಂದಾಗಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ರೈತರ ಭೂಮಿಗಳು ಬಂಡವಾಳಶಾಹಿಗಳ ವಶವಾಗುತ್ತಿದೆ. ರೈತ ಸಮುದಾಯವನ್ನು ಸದೃಢಗೊಳಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ರೈತ ಕುಲಕ್ಕೆ ಭವಿಷ್ಯವಿಲ್ಲದಂತೆ ಮಾಡಿದ್ದಾರೆ. ಆದ್ದರಿಂದ ರೈತರ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಚಳವಳಿ ಮುಂದುವರಿಸಲು ಹಾಗೂ ರೈತರ ಜೀವನಾಡಿಯಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಆದರ್ಶಗಳನ್ನು ಎತ್ತಿ ಹಿಡಿಯಲು ರೈತ ಸಂಘವು ಸಜ್ಜಾಗಬೇಕಾಗಿದೆ. ಈ ಹಿನ್ನೆಲೆ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಮಾವೇಶದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವುದು, ಹೊಸತನದೊಂದಿಗೆ ಹಳ್ಳಿ ಹಳ್ಳಿಗೆ ರೈತ ಸಂಘದ ಕಿರುಹೊತ್ತಿಗೆ ಬಿಡುಗಡೆ, ರೈತರ ಬಜೆಟ್ ಹಕ್ಕು ಮಂಡನೆ, ಸಂಘದ ಸಂವಿಧಾನ ಮುದ್ರಿತ ಪ್ರತಿ ಬಿಡುಗಡೆ, ಸಂಘದ ಹೊಸ ಮಾದರಿ ಬೋರ್ಡ್ ಅನಾವರಣಗೊಳಿಸುವ ಮತ್ತು ರೈತರ ಹಿತಾಸಕ್ತಿಯನ್ನು ಕಾಯುವ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು. ಆದ್ದರಿಂದ ಈ ಸಮಾವೇಶಕ್ಕೆ ರೈತ ಸಮುದಾಯ ಮತ್ತು ಪ್ರಗತಿಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.ಕಾರ್ಯಾಧ್ಯಕ್ಷ ರಘುಪತಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ರಾಜೇ ಅರಸ್, ತಾಲೂಕು ಅಧ್ಯಕ್ಷ ಸ್ವಾಮಿಗೌಡ, ಉಪಾಧ್ಯಕ್ಷ ಆನಂದ್ ಕೊಣಸೂರು, ಯುವ ಘಟಕದ ಅಧ್ಯಕ್ಷ ಮಹದೇವ್, ಮುಖಂಡರಾದ ದಶರಥ, ಮಲ್ಲೇಶ್, ಲೀಲಾವತಿ, ರಮೇಶ್, ಸತೀಶ್, ಶ್ರೀಕಾಂತ್ ಇದ್ದರು.