ಒಕ್ಕೂಟ ವ್ಯವಸ್ಥೆಯ ಮಹತ್ವ ಅರಿಯದ ತಾರತಮ್ಯದ ಬಜೆಟ್-

KannadaprabhaNewsNetwork | Published : Jul 24, 2024 12:18 AM

ಸಾರಾಂಶ

ಸುಮಾರು 11 ಸಾವಿರ ಕೋಟಿಗಳಷ್ಟು ಅಗತ್ಯವಿದ್ದಾಗಲೂ ಈ ಬಗ್ಗೆ ಬಜೆಟ್ ನಲ್ಲಿ ಕನಿಷ್ಟ ಪ್ರಸ್ತಾವ ಮಾಡದ ಕೇಂದ್ರ ಸರ್ಕಾರವು ತಾವು ಒಕ್ಕೂಟ ವ್ಯವಸ್ಥೆಯಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂಬ ವಾಸ್ತವವನ್ನು ಮರೆತಂತೆ ಕಾಣುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸರ್ಕಾರದ ಮತ್ತೊಂದು ಬಜೆಟ್ ಘೋಷಣೆಯ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೆ ಹಲವು ಬೇಡಿಕೆಗಳ ಹೊರತಾಗಿಯೂ ಶೂನ್ಯವನ್ನು ನೀಡಿದೆ. ಇದು ಒಕ್ಕೂಟ ವ್ಯವಸ್ಥೆಯ ಮಹತ್ವ ಅರಿಯದ ತಾರತಮ್ಯದ ಬಜೆಟ್ ಆಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.

ಸುಮಾರು 11 ಸಾವಿರ ಕೋಟಿಗಳಷ್ಟು ಅಗತ್ಯವಿದ್ದಾಗಲೂ ಈ ಬಗ್ಗೆ ಬಜೆಟ್ ನಲ್ಲಿ ಕನಿಷ್ಟ ಪ್ರಸ್ತಾವ ಮಾಡದ ಕೇಂದ್ರ ಸರ್ಕಾರವು ತಾವು ಒಕ್ಕೂಟ ವ್ಯವಸ್ಥೆಯಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂಬ ವಾಸ್ತವವನ್ನು ಮರೆತಂತೆ ಕಾಣುತ್ತಿದೆ. ಇನ್ನೂ ಎಸ್ಸಿ, ಎಸ್ಟಿ ಏಳಿಗೆಗಾಗಿ ಬಾಕಿ ಉಳಿಸಿಕೊಂಡ ಅನುದಾನದ ಜೊತೆಗೆ ಹೊಸ ಅನುದಾನವನ್ನು ಮಂಜೂರು ಮಾಡಬೇಕಾಗಿತ್ತು. ಆದರೆ, ಈ ಕುರಿತು ಎಲ್ಲಿಯೂ ಕನಿಷ್ಟ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ 7 ಲಕ್ಷದವರೆಗೆ ಇದ್ದ ತೆರಿಗೆ ಮಿತಿಯನ್ನು ಮತ್ತೆ 3 ಲಕ್ಷಕ್ಕೆ ಇಳಿಕೆ ಮಾಡುವ ಮೂಲಕ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಮೇಲೆ ಬರೆ ಎಳೆದಿರುವ ಕೇಂದ್ರ ಸರ್ಕಾರವು, ಯಾವುದೇ ಜನಪರ ಯೋಜನೆಯಿಲ್ಲದೇ ತೆರಿಗೆ ವಿಧಿಸುವುದೇ ತನ್ನ ಕಾಯಕ ಎಂಬಂತೆ ವರ್ತಿಸುತ್ತಿದೆ. ಮುಖ್ಯವಾಗಿ ಬಹುಮತ ಪಡೆಯದೇ ಬಿಹಾರ ಹಾಗೂ ಆಂಧ್ರಪ್ರದೇಶದ ರಾಜಕೀಯ ಪಕ್ಷಗಳನ್ನು ಆಶ್ರಯಿಸಿರುವ ಕೇಂದ್ರ ಸರ್ಕಾರ ಆ ರಾಜ್ಯಗಳಿಗೆ ಅತಿ ಹೆಚ್ಚು ಅನುದಾನ ಘೋಷಿಸಿದ್ದು ಇದು ಕಣ್ಣಿಗೆ ರಾಚುವಂತಿದೆ ಎಂದು ತಿಳಿಸಿದ್ದಾರೆ.

ಇವರ ಯಾವ ಬಜೆಟ್ ಘೋಷಣೆಗಳೂ ಸರಿಯಾಗಿ ಜಾರಿಯಾಗದೇ ಇರುವ ಕಾರಣದಿಂದಾಗಿ ಇವರ ಬಜೆಟ್ ಗಳು ಘೋಷಣೆಗಳಷ್ಟೇ ವಿನಃ ಅದರಿಂದ ಜನ ಸಾಮಾನ್ಯರಿಗಾಗಲೀ, ಶ್ರಮಿಕ ವರ್ಗದ ರೈತಾಪಿ ಸಮುದಾಯಕ್ಕಾಗಲೀ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ಟೀಕಿಸಿದ್ದಾರೆ.

Share this article