ನಾಡು, ಭಾಷೆ, ಸಂಸ್ಕೃತಿ ನಿರ್ಮಿಸುವ ಕಾರ್ಯ ಸಮಾಜಕ್ಕೆ ಧೈರ್ಯ ನೀಡುತ್ತದೆ

KannadaprabhaNewsNetwork | Published : May 19, 2025 2:17 AM
Follow Us

ಸಾರಾಂಶ

ಆತ್ಮಶ್ರೀಯೆಂದರೆ ತನ್ನನ್ಮೇ ತಾನು ಜಯಿಸಿಕೊಳ್ಳುವುದು. ತನ್ನಲ್ಲಿ ತಾನೇ ಧೀರತ್ವವನ್ನು ರೂಪಿಸಿಕೊಳ್ಳುವುದು

ಕನ್ನಡಪ್ರಭ ವಾರ್ತೆ ಮೈಸೂರು

ನಾಡು, ಭಾಷೆಯನ್ನು ಕಟ್ಟುವ ಕೆಲಸ, ಸಂಸ್ಕೃತಿಯನ್ನು ನಿರ್ಮಾಣ ಮಾಡುವ ಕಾರ್ಯ ಸಮಾಜಕ್ಕೆ ಒಂದು ಧೈರ್ಯ ಸ್ಥೈರ್ಯ ನೀಡುತ್ತದೆ ಎಂದು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಮೈಸೂರು ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದ ಅವರು, ಆಗ ಕುವೆಂಪು ಹೇಳಿದಂತೆ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗುತ್ತೇವೆ. ಜೊತೆಗೆ ಆತ್ಮಶಕ್ತಿ ಬೆಳೆಯುತ್ತದೆ. ಆತ್ಮಶ್ರೀಯೆಂದರೆ ತನ್ನನ್ಮೇ ತಾನು ಜಯಿಸಿಕೊಳ್ಳುವುದು. ತನ್ನಲ್ಲಿ ತಾನೇ ಧೀರತ್ವವನ್ನು ರೂಪಿಸಿಕೊಳ್ಳುವುದು ಎಂದು ಹೇಳಿದರು.

ಕನ್ನಡವೇ ಪ್ರಧಾನವಾದಾಗ ನಾವು ಬದುಕುವ ಇಡೀ ಸಮಾಜವೇ ಕನ್ನಡಮಯವಾಗುತ್ತದೆ. ಜೊತೆಗೆ ಕನ್ನಡ ಪ್ರಾಧ್ಯಾನತೆ ಪಡೆದು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಲಲಿತ ಕಲೆ, ಆಟೋಟಗಳಲ್ಲಿ ಕನ್ನಡಮಯತೆ ಎದ್ದು ಕಾಣುತ್ತದೆ ಎಂದು ಅವರು ತಿಳಿಸಿದರು.

ಕನ್ನಡ ಒಬ್ಬೊಬ್ಬರ ಬಾಯಲ್ಲೂ ಒಂದೊಂದು ರೀತಿಯಲ್ಲಿ ನುಡಿಯಲ್ಪಡುತ್ತದೆ. ಎಷ್ಟೋ ಸಿನಿಮಾ ನಟ- ನಟಿಯರು ಕನ್ನಡದಲ್ಲಿ ಆಗಿಹೋಗಿದ್ದಾರೆ. ಆದರೆ, ಡಾ. ರಾಜಕುಮಾರ್ ಅವರು ಕನ್ನಡ ನುಡಿಯುತ್ತಿದ್ದ ರೀತಿ ಮಾತ್ರ ಅನನ್ಯ. ಈ ರೀತಿ ನುಡಿಯಲು ಇನ್ಯಾವ ನಟರಿಗೂ ಸಾಧ್ಯವಿಲ್ಲ. ಸಾಹಿತಿಗಳಲ್ಲೂ ಅನಕೃ ಅವರ ರೀತಿಯಲ್ಲಿ ಕನ್ನಡ ಭಾಷಣ ಮಾಡಿದವರು ಅಪರೂಪ. ಇವರೆಲ್ಲ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಬೆಳಗಿಸಿದವರು ಎಂದರು.

ಸರ್ಕಾರ ಎಲ್ಲರನ್ನೂ, ಎಲ್ಲಾ ಕ್ಷೇತ್ರದವರನ್ನು ಗುರುತಿಸಲು ಖಂಡಿತವಾಗಿ ಸಾಧ್ಯವಿಲ್ಲ. ಆದರೆ, ಯಾರನ್ನು ಸರ್ಕಾರ ಗುರುತಿಸಲು ವಿಫಲವಾಗುತ್ತದೋ, ಅಂತಹ ಎಲೆಮರೆಯ ವಿವಿಧ ಕ್ಷೇತ್ರದ ಸಾಧಕರನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುತ್ತವೆ ಎಂದು ಅವರು ಶ್ಲಾಘಿಸಿದರು.

ಇದೇ ವೇಳೆ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ ಅವರಿಗೆ ಕರ್ನಾಟಕ ಸುಪುತ್ರ ರಾಜ್ಯ ಪ್ರಶಸ್ತಿ, ಹಿರಿಯ ಸಾಹಿತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್, ಶಿಕ್ಷಕ ಟಿ. ಸತೀಶ್ ಜವರೇಗೌಡ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಕ್ಷ ಕಾಲೇಜಿನ ಅಧ್ಯಕ್ಷ ಪಿ. ಜಯಚಂದ್ರ ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಉಪಾಧ್ಯಕ್ಷ ಕೆ.ಎಸ್. ಸತೀಶ್ ಕುಮಾರ್, ನಟಿ ಭೂಮಿಕಾ, ಗಾಯಕಿ ಜಯಂತಿ ಭಟ್, ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಗುಣವಂತ ಮಂಜು ಇದ್ದರು.