ಕನ್ನಡಪ್ರಭ ವಾರ್ತೆ ಮುಳಬಾಗಿಲುಬೈರಕೂರು ಹೋಬಳಿ ಟಿ.ಕುರುಬರಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ, ಕುರಿಗಾಹಿಗಳ ರಕ್ಷಣೆಗೆ ೬೫ ಎಕರೆ ಗೋಮಾಳ ಪಹಣಿಯಲ್ಲಿ ನಮೂದು ಮಾಡುವ ಜೊತೆಗೆ ಗಡಿ ಭಾಗದ ಹಳ್ಳಿಗಳ ಸಮಸ್ಯೆ ಸ್ಪಂದಿಸುವ ಭರವಸೆ ನೀಡಿದರು.
ಗಡಿ ಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಸಮಸ್ಯೆಗಳನ್ನು ಆಲಿಸಲು ಪ್ರತಿವಾರ ‘ಜಿಲ್ಲಾಧಿಕಾರಿ ನಡಿಗೆ ಗಡಿಭಾಗದ ಹಳ್ಳಿಗಳ ಕಡೆಗೆ’ ಎಂಬ ನೂತನ ಕಾರ್ಯಕ್ರಮದಲ್ಲಿ ಟಿ.ಕುರುಬರಹಳ್ಳಿಗೆ ಭೇಟಿ ನೀಡಿ ಮಾತನಾಡಿದರು.ಸರ್ಕಾರಿ ಜಮೀನಿನ ರಕ್ಷಣೆ
ಸುಮಾರು ೧೦ ಸಾವಿರ ಕುರಿಗಳಿರುವ ಶೇ.೭೦ರಷ್ಟು ನಾಯಕ ಜನಾಂಗಕ್ಕೆ ಸೇರಿರುವ ಗ್ರಾಮದ ರೈತರ ಒಗ್ಗಟ್ಟಿನ ಹೋರಾಟದಿಂದ ಊರಿನ ಬಲಾಢ್ಯರಿಂದ ಸರ್ಕಾರಿ ಸರ್ವೇ ನಂ.೩೬ ಪಿ ೧ ಹಾಗೂ ೩೭ರಲ್ಲಿ ೬೫ ಎಕರೆ ಜಮೀನನ್ನು ಉಳಿಸುವ ಮುಖಾಂತರ ಇತಿಹಾಸ ಸೃಷ್ಟಿ ಮಾಡಿದ್ದಾರೆಂದು ಕುರಿಗಾಹಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.ಪ್ರತಿ ಹಳ್ಳಿಯಲ್ಲೂ ಟಿ.ಕುರುಬರಹಳ್ಳಿಯಂತಹ ರೈತರು ಒಗ್ಗಟ್ಟಿನಲ್ಲಿದ್ದರೆ ಭೂಗಳ್ಳರ ಕಪಿಮುಷ್ಠಿಯಿಂದ ಸರ್ಕಾರಿ ಆಸ್ತಿಗಳನ್ನು ಉಳಿಸಿ ಅಭಿವೃದ್ಧಿ ಹಾಗೂ ಜಾನುವಾರುಗಳ ರಕ್ಷಣೆಗೆ ಮೀಸಲಿಡಬೇಕು. ಸರ್ಕಾರಿ ಭೂಮಿ ಉಳಿವಿಗಾಗಿ ನಿರಂತರವಾಗಿ ೬ ವರ್ಷಗಳ ಕಾಲ ಬಲಾಢ್ಯರ ವಿರುದ್ಧ ರೈತಸಂಘದ ಬೆಂಬಲದಿಂದ ಹೋರಾಟ ಮಾಡಿ ೧೬ ಜನ ಬಡ ಕುರಿಗಾಹಿಗಳು ಜೈಲಿಗೂ ಹೋಗಿರುವುದು ಖಂಡಿತವಾಗಿಯೂ ಅವರ ಸಾಧನೆ ಮೆಚ್ಚುವಂತದ್ದು ಎಂದು ಹೇಳಿದರು.ಕುರಿಗಳಿಗೆ 65 ಎಕರೆ ಮೀಸಲು
ಅಂಗೈಯಗಲ ಸರ್ಕಾರಿ ಭೂಮಿ ಸಿಕ್ಕರೆ ನಕಲಿ ದಾಖಲೆ ಸೃಷ್ಟಿ ಮಾಡಿ ಲಪಟಾಯಿಸುವ ಈ ಕಾಲದಲ್ಲಿ ಕುರಿಗಳಿಗಾಗಿಯೇ ಸರ್ಕಾರಿ ಜಮೀನು ಬೇಕು ಎಂದು ಹಠ ಹಿಡಿದಿರುವ ಕುರಿಗಾಹಿಗಳ ಹಿತದೃಷ್ಟಿಯಿಂದ ೬೫ ಎಕರೆ ಕುರಿಗಾಹಿಗಳಿಗೆ ಮೀಸಲು ಎಂದು ಪಹಣಿಯಲ್ಲಿ ನಮೂದು ಮಾಡುವ ಭರವಸೆಯನ್ನು ನೀಡಿದರು.ಕುರಿಗಾಹಿ ಟಿ.ಕುರುಬರಹಳ್ಳಿ ರೈತ ರಾಮಕೃಷ್ಣಪ್ಪ ಹಾಗೂ ಗ್ರಾಮಸ್ಥರು ಮಾತನಾಡಿ, ಸುಮಾರು ೧೦ ಸಾವಿರ ಕುರಿಗಳಿರುವ ನಮ್ಮ ಗ್ರಾಮದಲ್ಲಿ ಪರಿಶಿಷ್ಟ ಜನಾಂಗಕ್ಕೆ ಸೇರಿರುವವರೇ ಹೆಚ್ಚು. ಕೆಲವರು ಕೂಲಿ ಮಾಡಿದರೆ ಇನ್ನೂ ಕೆಲವರು ವ್ಯವಸಾಯ ಮಾಡಿಕೊಂಡು ಜೀವನ ಮಾಡುವ ಗಡಿಭಾಗದ ರೈತರಿಗೆ ಬೆಂಬಲವಾಗಿ ರೈತಸಂಘ ಸಂಪೂರ್ಣ ಬೆಂಬಲ ನೀಡಿರುವ ಜೊತೆಗೆ ಯಾವುದೇ ಸಮಸ್ಯೆಯಾದರೂ ನೊಂದ ರೈತರ ಪರ ಹೋರಾಟ ಮಾಡುತ್ತಾರೆ ಎಂದರು.ಕುರಿಗಳಿಗೆ ನೀರಿನ ವ್ಯವಸ್ಥೆ
ಈಗಾಗಲೇ ೬೫ ಎಕರೆ ಸರ್ಕಾರಿ ಗೋಮಾಳದಲ್ಲಿ ಅಳವಡಿಸಿರುವ ನಾಮಫಲಕಗಳು ಶಾಶ್ವತವಾಗಿ ಇರುವ ಜೊತೆಗೆ ನಮ್ಮ ಹೋರಾಟಕ್ಕೆ ನ್ಯಾಯ ಸಿಗಬೇಕಾದರೆ ಯಾವುದೇ ರಾಜಕೀಯ ಒತ್ತಡಕ್ಕೆ ಕಂದಾಯ ಅಧಿಕಾರಿಗಳು ಮಣಿಯದೆ ದರಖಾಸ್ತು ಕಮಿಟಿ ಮೂಲಕ ಮಂಜೂರು ಮಾಡದೆ ಕುರಿಗಾಹಿಗಳಿಗೆ ಮೀಸಲಿಡುವ ಜೊತೆಗೆ ೬೫ ಎಕರೆಯಲ್ಲಿ ಬೇವು, ಆಲ, ರಾಗಿ ಮತ್ತಿತರ ಮರಗಳನ್ನು ನೆಡುವ ಜೊತೆಗೆ ಪಂಚಾಯಿತಿ ವತಿಯಿಂದ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಬೇಸಿಗೆಯಲ್ಲಿ ಕುರಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗುಂಡುತೋಪು, ಸ್ಮಶಾನ ರಸ್ತೆ, ಬಂಡಿ ದಾರಿ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡುವ ಜೊತೆಗೆ ಪಿ ನಂಬರ್ ದುರಸ್ಥಿ ಮಾಡಲು ಗಡಿ ಭಾಗದ ಹಳ್ಳಿಗಳನ್ನು ವಿಶೇಷ ಪ್ರಕರಣಗಳು ಎಂದು ಪರಿಗಣಿಸಿ ಪ್ರತಿ ಪಂಚಾಯಿತಿಯಲ್ಲಿ ಪಿ ನಂಬರ್ ದುರಸ್ತಿ ಆಂದೋಲನ ನಡೆಸಬೇಕೆಂದು ಒತ್ತಾಯಿಸಿದರು.
ಜನರ ಸಮಸ್ಯೆಗೆ ಸ್ಪಂದನೆತಹಸೀಲ್ದಾರ್ ಗೀತಾ ಮಾತನಾಡಿ, ಸರ್ಕಾರಿ ಆಸ್ತಿಗಳು ಇದ್ದರೆ ಬಾಯಿ ಬಿಡುವ ಈ ಕಾಲದಲ್ಲಿ ೬೫ ಎಕರೆ ಗೋಮಾಳ ಉಳಿಸಿಕೊಂಡು ಕುರಿಗಾಹಿಗಳಿಗೆ ಮೀಸಲಿಡಿ ಎಂದು ಬೇಡಿಕೆ ಇಟ್ಟಿರುವುದು ಸಂತೋಷದ ವಿಚಾರ. ಯಾವುದೇ ಕಾರಣಕ್ಕೂ ೬೫ ಎಕರೆಯಲ್ಲಿ ಯಾರಿಗೂ ದರಖಾಸ್ತು ಕಮಿಟಿ ಮುಖಾಂತರ ಮಂಜೂರು ಮಾಡುವುದಿಲ್ಲ. ರೈತರ ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ಕಚೇರಿಗೆ ಬಂದು ತಿಳಿಸಿದರೆ ಗಡಿಭಾಗದ ರೈತರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.