ಕನ್ನಡಪ್ರಭ ವಾರ್ತೆ ಕನಕಪುರ
ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಾ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿರುವ ರಾಮನಗರ ಜಿಲ್ಲಾಧಿಕಾರಿಗಳ ನಡೆಯು ಅತ್ಯಂತ ಖಂಡನೀಯ ಎಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಹಾಗೂ ತಾಲೂಕು ಪ್ರಗತಿಪರ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾನ್ಯ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರದ ದರ್ಪದಿಂದ ಯಾವುದೇ ಸಂಘ ಸಂಸ್ಥೆಗಳು, ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯಾವುದೇ ಪ್ರತಿಭಟನೆ ನಡೆಸದಂತೆ ಶಾಶ್ವತವಾಗಿ ನಿಷೇಧಾಜ್ಞೆಯನ್ನು ಹೇರಿರುವುದು ಸಾರ್ವಜನಿಕವಾಗಿ ತಿಳಿದ ಸಂಗತಿ. ಆದರೆ ಸೋಮವಾರ ವಕೀಲರ ಸಂಘದ ವತಿಯಿಂದ ನಡೆದ ಪ್ರತಿಭಟನೆಗೆ ನಿಷೇಧಿತ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿ ಅವರಿಂದ ಮನವಿ ಪತ್ರ ಸ್ವೀಕರಿಸಿರುವುದು ನೋಡಿದಾಗ ಅವರ ರೈತ ಹಾಗೂ ಜನಪರ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿರುವ ಹಾಗೂ ಕಾನೂನು ತಜ್ಞ ವಕೀಲರಿಗೆ ಪ್ರತಿಭಟನೆಗೆ ಅವಕಾಶ ನೀಡಿ ದೇಶದ ಬೆನ್ನೆಲುಬಾಗಿರುವ ರೈತ ಸಂಘ, ದಲಿತ ಸಂಘ, ಕನ್ನಡಪರ ಸಂಘಟನೆಗಳಿಗೆ ಅವಕಾಶ ನೀಡದಿರುವುದು ನೋಡಿದರೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದ್ದು ಜಿಲ್ಲಾಧಿಕಾರಿಗಳ ಈ ಮಲತಾಯಿ ಧೋರಣೆಯ ವಿರುದ್ಧ ಜಿಲ್ಲೆಯ ಎಲ್ಲಾ ಜನಪರ, ರೈತಪರ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಪ್ರತಿಭಟನೆಗೆ ನಮಗೂ ಸಮಾನ ಅವಕಾಶ ನೀಡುವಂತೆ ಹಾಗೂ ತಾವು ವಿಧಿಸಿರುವ ನಿಷೇಧಾಜ್ಞೆಯಂತಹ ಜನ ವಿರೋಧಿ ನೀತಿಯನ್ನು ಇನ್ನಾದರೂ ತೆರವು ಗೊಳಿಸಿ ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಗೌರವಿಸುವಂತೆ ಮನವಿ ಮಾಡಿದರು.