ಜಿಲ್ಲೆಯ ಸಚಿವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ: ಕೋಡಿಹಳ್ಳಿ ಚಂದ್ರಶೇಖರ್

KannadaprabhaNewsNetwork |  
Published : Jan 13, 2024, 01:32 AM IST
ರೈತರ ಧರಣಿ | Kannada Prabha

ಸಾರಾಂಶ

ತುಮಕೂರಿನಲ್ಲಿ ಕೊಬ್ಬರಿ ಬೆಲೆ 12 ಸಾವಿರ ರು. ನಿಂದ 15 ಸಾವಿರ ರು. ಮಾಡಿ ಕೊಬ್ಬರಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತರು 5 ದಿನಗಳಿಂದ ಧರಣಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಕಳೆದ ಐದು ದಿನಗಳಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಬೆಂಬಲ ಬೆಲೆ, ಕೊಬ್ಬರಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ, ಜಿಲ್ಲೆಯಲ್ಲಿರುವ ಗೃಹ ಮಂತ್ರಿಗಳಾಗಲಿ, ಸಹಕಾರ ಸಚಿವರಾಗಲಿ ಇತ್ತ ತಿರುಗಿಯೂ ನೋಡಿಲ್ಲ. ಇದು ಸರ್ಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಎದುರು ನಡೆಯುತ್ತಿರುವ ಆಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಕೇಂದ್ರ ಸರ್ಕಾರ 1,1750 ರು ಇದ್ದ ಉಂಡೆಕೊಬ್ಬರಿ ಬೆಂಬಲ ಬೆಲೆಯನ್ನು 250 ರು. ಹೆಚ್ಚಳ ಮಾಡಿ ಕ್ವಿಂಟಲ್ ಕೊಬ್ಬರಿಗೆ 12 ಸಾವಿರ ರು. ನಿಗದಿ ಮಾಡಿ, ಕೊಬ್ಬರಿ ಕೊಳ್ಳಲು ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಕೊಬ್ಬರಿ ಕೊಳ್ಳಲು ಮೀನಾಮೇಷ ಎಣಿಸುತ್ತಿದೆ. ಕೂಡಲೇ ನಫೆಡ್‌ ಕೇಂದ್ರಗಳನ್ನು ತೆರೆದು ಕೊಬ್ಬರಿ ಖರೀದಿ ಆರಂಭಿಸಬೇಕೆಂಬುದು ರೈತರ ಒತ್ತಾಯವಾಗಿದೆ ಎಂದರು.

ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ. ಸಹಕಾರ ಸಚಿವರು ಕೇಂದ್ರ ಸರ್ಕಾರ 12 ಸಾವಿರ ರು. ನೀಡಿದರೆ ಖರೀದಿಸಲು ಸಿದ್ಧ ಎಂದಿದ್ದಾರೆ. ಈಗಾಗಲೇ ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೆ ಖರೀದಿ ಕೇಂದ್ರ ತೆರೆಯಲು ಗ್ರೀನ್ ಸಿಗ್ನಲ್ ದೊರೆತ್ತಿದೆ. ಹಾಗಾಗಿ ಗೃಹ ಮತ್ತು ಸಹಕಾರ ಸಚಿವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಕೊಬ್ಬರಿ ಬೆಳೆಗಾರರ ನೆರವಿಗೆ ಬರಲಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ಮಾತನಾಡಿ, ಕಳೆದ ಬಾರಿ ಬೆಂಬಲ ಬೆಲೆಯಲ್ಲಿ ಖರೀದಿಸಲು ನಫೆಡ್ ಕೇಂದ್ರ ತೆರೆದರೂ ನೇಪ ಮಾತ್ರಕ್ಕೆ ರೈತರಿಂದ ಕೊಬ್ಬರಿ ಖರೀದಿಸಿ, ದಲ್ಲಾಳಿಗಳು, ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲ ವಾಗುವಂತೆ ನಡೆದುಕೊಂಡಿದೆ. ಇದರ ಫಲವಾಗಿ ರೈತರು ಲಕ್ಷಾಂತರ ರು. ನಷ್ಟ ಅನುಭವಿಸಿದರು. ಆದರೆ ಈ ಬಾರಿ ಆಗಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಕನಿಷ್ಠ 1.50 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಬೇಕು. ಅಲ್ಲದೆ ಕೇರಳ, ತಮಿಳುನಾ ಡುಮತ್ತು ಆಂಧ್ರಪ್ರದೇಶದಲ್ಲಿ ಖರೀದಿಸುವಂತೆ ಕರ್ನಾಟಕದಲ್ಲಿಯೂ ಮಿಲ್ಲಿಂಗ್ ಕೊಬ್ಬರಿಯನ್ನು ಖರೀದಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿದರು.

ಧರಣಿಯಲ್ಲಿ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿವರತ್ನಮ್ಮ, ಜಿಲ್ಲಾ ಗೌರವಾಧ್ಯಕ್ಷ ಲೋಕೇಶ್ ಕೆ.ವಿ., ಜಿಲ್ಲಾ ಕಾರ್ಯದರ್ಶಿ ಸಂಪಿಗೆ ಕೀರ್ತಿ, ವಿವಿಧ ತಾಲೂಕು ಅಧ್ಯಕ್ಷರಾದ ಸಣ್ಣದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು, ನಾಗೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಕೊಟ್ಟ ಮಾತು ಉಳಿಸಿಕೊಳ್ಳಲಿ

ಚುನಾವಣಾ ಪೂರ್ವದಲ್ಲಿ ಇಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಬ್ಬರಿಗೆ ವೈಜ್ಞಾನಿಕ ಬೆಲೆಗಾಗಿ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ರೈತರ ಬಳಿಗೆ ಬಂದು ನಮ್ಮ ಸರ್ಕಾರ ಬಂದರೆ ಕ್ವಿಂಟಲ್ ಕೊಬ್ಬರಿಗೆ 15000 ರು. ನೀಡುವ ಭರವಸೆ ನೀಡಿದರು. ಆದರೆ ಅಧಿಕಾರಕ್ಕೆ ಬಂದ ನಂತರ ಕೇವಲ 1500 ರು. ಪ್ರೋತ್ಸಾಹ ಧನ ನೀಡಿ, ಕೈತೊಳೆದುಕೊಳ್ಳಲು ಹೊರಟಿದೆ. ಕೊಟ್ಟ ಮಾತಿನಂತೆ ಸರ್ಕಾರ ಕೇಂದ್ರದ 12 ಸಾವಿರ ಬೆಂಬಲ ಬೆಲೆ ಜೊತೆಗೆ, ರಾಜ್ಯ ಸರಕಾರ 3 ಸಾವಿರ ರು. ಪ್ರೋತ್ಸಾಹ ಧನ ನೀಡಿ ಒಟ್ಟು 15000 ರು.ಗೆ ಕ್ವಿಂಟಲ್‌ ಕೊಬ್ಬರಿ ಖರೀದಿಸಬೇಕೆಂಬುದು ನಮ್ಮ ಒತ್ತಾಯ. ರಾಜಕೀಯ ಲಾಭಕೋಸ್ಕರ ಇಂದು, ಮುಂದು ನೋಡದೆ ಕೊಬ್ಬರಿ ಖರೀದಿಸಲಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ