ಜಿಲ್ಲೆ ಹೆಸರು ಬದಲಾವಣೆ: ಜನರ ಭಾವನೆಗೆ ಧಕ್ಕೆ

KannadaprabhaNewsNetwork | Updated : Jul 13 2024, 12:40 PM IST

ಸಾರಾಂಶ

ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸುವುದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಇದರಿಂದ ಸಾಮಾನ್ಯರಿಗೆ ಯಾವುದೇ ಲಾಭವಿಲ್ಲ ಎಂದು ಕೆಆರ್‌ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ತಿಳಿಸಿದರು. ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

 ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಮುಂದಾಗಿರುವುದು ಅಸಂಬದ್ಧ ಮತ್ತು ಸ್ವಹಿತಾಸಕ್ತಿಗಾಗಿ ಮಾಡುತ್ತಿರುವ ಮೂರ್ಖತನದ ಕ್ರಮ. ಜಿಲ್ಲೆಯ ಹೆಸರನ್ನು ಬದಲಾಯಿಸುವುದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಇದರಿಂದ ಸಾಮಾನ್ಯರಿಗೆ ಯಾವುದೇ ಲಾಭವಿಲ್ಲ ಎಂದು ಕೆಆರ್‌ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರದ ಹೆಸರನ್ನು ‘ಲಾಸ್ ಏಂಜಲೀಸ್’, ‘ಲಂಡನ್’ ಅಥವಾ ‘ಸ್ವರ್ಗ’ ಎಂದು ಬದಲಾಯಿಸಿದರೂ ಏನೂ ಬದಲಾವಣೆ ಆಗುವುದಿಲ್ಲ. ಮೊದಲು ಮೂಲಭೂತ ಸೌಕರ್ಯ ಒದಗಿಸಬೇಕು. ದಕ್ಷ, ಪಾರದರ್ಶಕ ಆಡಳಿತದಿಂದ, ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಭ್ರಷ್ಟಾಚಾರ ತೊಲಗಿಸಿದರೆ, ನಂತರ ಯಾವ ಹೆಸರಿದ್ದರೂ ರಾಮನಗರ ತಾನಾಗಿಯೇ ಅಭಿವೃದ್ಧಿ ಕಾಣುತ್ತದೆ ಎಂದರು.

ಮರುನಾಮಕರಣ ರಿಯಲ್ ಎಸ್ಟೇಟ್ ಉದ್ದೇಶದಿಂದ ಮಾಡುತ್ತಿರುವ ಕ್ರಮವಾಗಿದೆ. ಇದರಿಂದ ಜಿಲ್ಲೆಯ ರೈತರು ತಮ್ಮ ಜಮೀನಿಗೆ ಹೆಚ್ಚಿಗೆ ಬೆಲೆ ಬರುತ್ತದೆ ಎಂಬ ಭಾವನೆಯೇ ಸುಳ್ಳು. ಇದರ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ವ್ಯವಹಾರ ಮತ್ತು ಉದ್ಯಮ ಬೆಳೆಸಿಕೊಳ್ಳಲು ಮಾಡುತ್ತಿರುವ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯುವುದಾಗಿ ಚುನಾವಣಾ ಸಮಯದಲ್ಲಿ ರಾಜ್ಯದ ರೈತರಿಗೆ ಆಶ್ವಾಸನೆ ನೀಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದು ವರ್ಷವಾದರೂ ಈ ಬಗ್ಗೆ ಕ್ರಮ ಜರುಗಿಸಿಲ್ಲ. ಈ ವಿಚಾರವಾಗಿ ಈಗಾಗಲೇ ರೈತ ಸಂಘದವರು ಎರಡು ಬಾರಿ ಧರಣಿ ನಡೆಸಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.

ಜಿಲ್ಲಾ ಕಾರ್ಯದರ್ಶಿ ಎಚ್.ಕಿರಣ್, ಮಹಮ್ಮದ್ ಮುಸಾದಿಕ್ ಪಾಷಾ, ಲಿಯಾಕತ್ ಅಲಿ, ರೆಹ್ಮತ್ ಪಾಷಾ, ರಘುನಂದನ್ ಹಾಜರಿದ್ದರು.

Share this article