ಸಂಗೀತ, ಸಾಹಿತ್ಯ, ಕ್ರೀಡೆಗೆ ಜಿಲ್ಲೆಯ ಕೊಡುಗೆ ಅಪಾರ

KannadaprabhaNewsNetwork | Published : Dec 5, 2024 12:33 AM

ಸಾರಾಂಶ

ಜಿಲ್ಲೆಯ ಕುಮಾರವ್ಯಾಸ, ಭೀಮಸೇನ್ ಜೋಶಿ, ಸುನಿಲ್ ಜೋಶಿ, ಪ್ರೇಮಾ ಹುಚ್ಚಣ್ಣವರ ಅನೇಕ ಮಹನೀಯರು ತಮ್ಮ ಪ್ರತಿಭೆಯನ್ನು ರಾಷ್ಟ್ರಾದ್ಯಂತ ಪಸರಿಸಿದ್ದಾರೆ

ಗದಗ: ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಕೊಡಗೆ ಅಪಾರವಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.

ನಗರದ ಸನ್ಮಾರ್ಗ ಪಪೂ ಕಾಲೇಜಿನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಯುವ ಸಂಘಗಳ ಒಕ್ಕೂಟ, ಲಾಯನ್ಸ್ ಶಿಕ್ಷಣ ಸಂಸ್ಥೆ, ಸನ್ಮಾರ್ಗ ಪಪೂ ಮಹಾವಿದ್ಯಾಲಯದ ಸಹಯೋಗದಲ್ಲಿ ಜರುಗಿದ 2024-25ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಕುಮಾರವ್ಯಾಸ, ಭೀಮಸೇನ್ ಜೋಶಿ, ಸುನಿಲ್ ಜೋಶಿ, ಪ್ರೇಮಾ ಹುಚ್ಚಣ್ಣವರ ಅನೇಕ ಮಹನೀಯರು ತಮ್ಮ ಪ್ರತಿಭೆಯನ್ನು ರಾಷ್ಟ್ರಾದ್ಯಂತ ಪಸರಿಸಿದ್ದಾರೆ. ರಾಷ್ಟ್ರಕ್ಕೆ ಗದಗ ಜಿಲ್ಲೆ ಎಲ್ಲ ರಂಗಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದೆ, ಯುವಜನತೆ ತಮ್ಮ ಆಸಕ್ತಿ ಅರಿತು ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾತ್ಮಕವಾಗಿ ಪ್ರತಿಭೆ ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತರಬೇಕು. ಈ ನಿಟ್ಟಿನಲ್ಲಿ ಯುವಜನೋತ್ಸವ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಭಾರತ ರತ್ನ ಪ್ರಶಸ್ತಿ ಪಡೆದ ಪಂ. ಭೀಮಸೇನ ಜೋಶಿ ಸಂಗೀತಕ್ಕೆ ನೀಡಿದ ಕೊಡುಗೆ ಅನನ್ಯವಾದುದು, ಪಂ.ಪುಟ್ಟರಾಜ ಗವಾಯಿಗಳು ಸಂಗೀತಕ್ಕೆ ಸಲ್ಲಿಸಿದ ಸೇವೆ ಅಪಾರ, ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಸ್ಪರ್ಧಾಳುಗಳು ಭಾರತೀಯ ಕಲೆಗಳತ್ತ ಗಮನಹರಿಸಿ ಉತ್ತಮ ಯಶಸ್ಸು ಪಡೆದು ವಿಭಾಗ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಉತ್ಸವಗಳು ವಿದ್ಯಾರ್ಥಿಗಳಲ್ಲಿ ಉತ್ಸಾಹ, ಪ್ರೇರಣೆ, ಯಶಸ್ಸು ತರಲಿ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ತೆಗೆದುಕೊಂಡು, ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ಪಡೆಯಲು ಯಾವ ರೀತಿ ತಯಾರಿ ಮಾಡಬೇಕು ಎನ್ನುವದರ ಬಗ್ಗೆ ಯೋಚನೆ ಮಾಡಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸ್ಪೂಡೆಂಟ್ಸ್ ಎಜುಕೇಶನ್ ಸಂಸ್ಥೆಯ ಚೇರಮನ್‌ ಪ್ರೊ. ರಾಜೇಶ ಕುಲಕರ್ಣಿ ಮಾತನಾಡಿ, ಯುವಜನೋತ್ಸವದಲ್ಲಿ ಅತ್ಯಂತ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ತಮ್ಮ ಪ್ರತಿಭೆ ವಿದ್ಯಾರ್ಥಿಗಳು ಅನಾವರಣಗೊಳಿಸಲಿ ಎಂದರು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಚಿ, ಜಿಲ್ಲಾ‌ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಎಸ್.ಎನ್. ಬಳ್ಳಾರಿ, ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ರಂಜನಿ.ಎನ್ ಸೇರಿದಂತೆ ಇದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ ನಿರೂಪಿಸಿದರು. ಪ್ರಾ. ಪ್ರೊ. ಪ್ರೇಮಾನಂದ ರೋಣದ ವಂದಿಸಿದರು.

Share this article