ಜಿಲ್ಲೆಯ ತ್ರೈಮಾಸಿಕ ಪ್ರಗತಿ ಪರಿಶೀಲನೆ ಗ್ರಹಣ!

KannadaprabhaNewsNetwork |  
Published : Oct 05, 2026, 02:15 AM IST
ಗದಗ ಜಿಲ್ಲಾಡಳಿತ ಭವನ..  | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯಬೇಕಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಯದೇ ಒಂದೂವರೆ ವರ್ಷ ಕಳೆದಿದ್ದು, ಇನ್ನೇನು ನೂತನ ಸಚಿವರ ನೇಮಕವಾದ ನಂತರವಾದರೂ ಜಿಲ್ಲೆಯ ಸಮಗ್ರ ಪ್ರಗತಿ ಪರಿಶೀಲನೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಮತ್ತೊಮ್ಮೆ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ನೆಪ, ಒಂದೂವರೆ ವರ್ಷದ ಬಳಿಕ ನಿಗದಿಯಾಗಿದ್ದ ಸಭೆ ಮುಂದೂಡಿಕೆ

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯಬೇಕಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಯದೇ ಒಂದೂವರೆ ವರ್ಷ ಕಳೆದಿದ್ದು, ಇನ್ನೇನು ನೂತನ ಸಚಿವರ ನೇಮಕವಾದ ನಂತರವಾದರೂ ಜಿಲ್ಲೆಯ ಸಮಗ್ರ ಪ್ರಗತಿ ಪರಿಶೀಲನೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಕಾಮಗಾರಿಗಳ ಪ್ರಗತಿಯನ್ನು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲಿಸಬೇಕಾದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆಗೆ ಮತ್ತೆ ಗ್ರಹಣ ಹಿಡಿದಿದೆ.

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ, ಸೆ. 28ರಂದು ಉನ್ನತ ಶಿಕ್ಷಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ.

ಗದಗ ಜಿಲ್ಲೆಯಲ್ಲಿ ಕೊನೆಯದಾಗಿ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ 2025ರ ಮೇ 6ರಂದು ನಡೆದಿತ್ತು. ಬಳಿಕ ಸುದೀರ್ಘ ಅವಧಿಯ ನಂತರ ಸಭೆ ನಿಗದಿಯಾಗಿದ್ದರೂ, ಇದೀಗ ಚುನಾವಣೆ ನೀತಿ ಸಂಹಿತೆಯ ಕಾರಣಕ್ಕೆ ಮತ್ತೆ ಮುಂದೂಡಿಕೆಯಾಗಿದೆ.

ವರ್ಷಕ್ಕೊಮ್ಮೆ ಸಭೆ:

ತ್ರೈಮಾಸಿಕ ಪ್ರಗತಿ ಪರಿಶೀಲನೆಯ ಮೂಲ ಉದ್ದೇಶವೇ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರದ ಯೋಜನೆಗಳು, ಇಲಾಖೆಗಳ ಗುರಿ ಸಾಧನೆ, ಬಾಕಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸುವುದು. ಆದರೆ ಗದಗ ಜಿಲ್ಲೆಯಲ್ಲಿ ಈ ಸಭೆಗಳು ವರ್ಷಕ್ಕೊಮ್ಮೆ ನಡೆಯುತ್ತಿದ್ದು, ತ್ರೈಮಾಸಿಕ ಪ್ರಗತಿ ಪರಿಶೀಲನೆ ಎಂಬ ಹೆಸರೇ ಅರ್ಥ ಕಳೆದುಕೊಳ್ಳುತ್ತಿದೆ. 2021ರ ಮಾರ್ಚ್ 10ರಿಂದ ಈ ವರೆಗೆ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆದಿದ್ದು 5 ಮಾತ್ರ. ಒಂದೆಡೆ ಜಿಪಂಯಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲ. ಇತ್ತ ಸಚಿವರು ನಿಯಮಿತವಾಗಿ ಸಭೆ ನಡೆಸಿ, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವೂ ಗದಗ ಜಿಲ್ಲೆಯಲ್ಲಿ ನಡೆಯುತ್ತಿಲ್ಲ.

ಅಧಿಕಾರಿಗಳದ್ದೆ ಆಡಳಿತ:

ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯ ಪ್ರಮುಖ ಉದ್ದೇಶ ಅಧಿಕಾರಿಗಳು ನೀಡುವ ಪ್ರಗತಿ ವರದಿಯನ್ನು ಪ್ರಶ್ನಿಸುವುದು, ಕೊರತೆಗಳನ್ನು ಗುರುತಿಸುವುದು ಮತ್ತು ಅಗತ್ಯ ತಿದ್ದುಪಡಿ ಕ್ರಮಗಳಿಗೆ ಸೂಚನೆ ನೀಡುವುದಾಗಿದೆ. ಆದರೆ ವರ್ಷಕ್ಕೊಮ್ಮೆ ಸಭೆ ನಡೆಯುವ ಕಾರಣಕ್ಕೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಭಯವೇ ಇಲ್ಲದಂತಾಗಿದೆ. ಇದರಿಂದ ಈಚೆಗೆ ಜಿಲ್ಲೆಯಲ್ಲಿ ನಡೆದಿರುವ ಘಟನೆಗಳೇ ಸಾಕ್ಷಿಯಾಗಿವೆ.

ಮೂರು ಗಂಟೆಯೂ ನಡೆಯದ ಸಭೆಗಳು:

ಕಳೆದ ಕೆಲವು ವರ್ಷಗಳ ಸಭೆಗಳ ಅವಧಿಯನ್ನು ಗಮನಿಸಿದರೆ, ನಡೆದ ಸಭೆಗಳ ಬಹುಪಾಲು ಮೂರು ಗಂಟೆಗೂ ಹೆಚ್ಚು ಕಾಲ ನಡೆದಿಲ್ಲ. ಕೃಷಿ, ತೋಟಗಾರಿಕೆ, ಆರೋಗ್ಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಸೇರಿದಂತೆ ಕೆಲ ಪ್ರಮುಖ ಇಲಾಖೆಗಳ ವಿಷಯಗಳನ್ನು ಪರಿಶೀಲಿಸಿದ ಬಳಿಕ ಸಭೆ ಮುಕ್ತಾಯಗೊಳ್ಳುತ್ತಿದೆ. ಕೆಡಿಪಿ ವ್ಯಾಪ್ತಿಗೆ ಅಂದಾಜು 64 ಇಲಾಖೆಗಳು ಬರುತ್ತವೆ. ಆದರೆ ಕಳೆದೊಂದು ದಶಕದ ಅವಧಿಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ಒಮ್ಮೆಯೂ ನಡೆದಿಲ್ಲ.

ಕೋಟ್

ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಗದಗ ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ವಿಫಲವಾಗಿದೆ. ಇದನ್ನೇ ಅನುಕೂಲ ಮಾಡಿಕೊಂಡಿರುವ ಜಿಲ್ಲೆಯ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಅದರಲ್ಲೂ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಬಿಜೆಪಿ ಯುವ ಮುಖಂಡ ವಸಂತ ಪಡಗದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಮೌನ ಮುರಿದು ನಿಲುವು ತಿಳಿಸಲಿ: ಪ್ರಸಾದ ಹೆಗಡೆ
ಇಂದು ಮೋಹನ ಲಿಂಬಿಕಾಯಿ ನಾಮಪತ್ರ ಸಲ್ಲಿಕೆ: ಶಾಸಕ ಎಚ್‌.ಕೆ. ಪಾಟೀಲ