ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮತದಾರರನ್ನು ಮತಗಟ್ಟೆಗಳ ಕಡೆಗೆ ಸೆಳೆಯಲು ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ವಿಶೇಷ ಮತಗಟ್ಟೆಗಳು ವೈವಿಧ್ಯಮಯ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದ್ದು, ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿಶೇಷ ಮತಗಟ್ಟೆಗಳಿಗೆ ಭೇಟಿ ನೀಡಿ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು, ಜಿಪಂ ಉಪ ಕಾರ್ಯದರ್ಶಿಪಿ. ಲಕ್ಷ್ಮೀ, ತಾಪಂ ಇಒ ಕೃಷ್ಣಪ್ಪ ವಿಶೇಷ ಮತಗಟ್ಟೆ ವೀಕ್ಷಣೆ ಸಮಯದಲ್ಲಿ ಜಿಲ್ಲಾಧಿಕಾಗೆ ಸಾಥ್ ನೀಡಿದರು.ರಾಮಸಮುದ್ರ ಬಡಾವಣೆಯ ಬಾಲರಪಟ್ಟಣ ಶಾಲೆಯೆದುರು ಇರುವ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಸ್ಥಾಪಿಸಲಾಗಿರುವ ಸಾಂಪ್ರಾದಾಯಿಕ ಮತಗಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಂಡಕ್ಕೆ ಅದ್ದೂರಿ ಸ್ವಾಗತ ದೊರೆಯಿತು.
ಮತಗಟ್ಟೆಯನ್ನು ತಳಿರು, ತೋರಣಗಳು ಹಾಗೂ ರಂಗೋಲಿ ಚಿತ್ತಾರದಿಂದ ಸಿಂಗರಿಸಲಾಗಿತ್ತು. ಜಾನಪದ ಕಲಾವಿದರು ಸಿದ್ದಪ್ಪಾಜಿ, ಮಂಟೇಸ್ವಾಮಿ ಪದಗಳನ್ನು ಹಾಡುವ ಮೂಲಕ ಗಣ್ಯರನ್ನು ಸ್ವಾಗತಿಸಿದರು.ಜಿಲ್ಲಾಧಿಕಾರಿಗಳಿಂದ ಮತಗಟ್ಟೆಗೆ ಮೆಚ್ಚುಗೆ:ಸಾಂಪ್ರದಾಯಿಕ ಮತಗಟ್ಟೆಯಲ್ಲಿ ಕಲಾವಿದರು ಬಳಸುವ ಡೊಳ್ಳು, ತಮಟೆ, ನಗಾರಿ ಓಲಗ, ಹಾರ್ಮೋನಿಯಂ, ಇತರೆ ವಾದ್ಯ ಪರಿಕರಗಳನ್ನು ಇಡಲಾಗಿತ್ತು. ಸಾಂಪ್ರದಾಯಿಕವಾಗಿ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ಶಾವಿಗೆ ಒತ್ತುವ ಮರದ ಯಂತ್ರ, ರಾಗಿ ಬೀಸುವ ಕಲ್ಲು, ಕುಟ್ಟಣಿಗೆ, ಬಿದಿರಿನ ಕುಕ್ಕೆ, ಮೊರ, ಒಳಕಲ್ಲು, ಧಾನ್ಯಗಳನ್ನು ಅಳತೆ ಮಾಡುವ ಸೇರು, ಪಾವು, ಚಟಾಕು, ಒಂದ್ರಿ, ಅಡುಗೆ ಮಾಡುವ ವಿವಿಧ ಗಾತ್ರದ ಮಡಕೆಗಳು, ಹಸೆಮಣೆ ಸೇರಿದಂತೆ ಇನ್ನಿತರೆ ಪರಿಕರಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಮತಗಟ್ಟೆ ಸ್ಥಾಪನೆಗೆ ಮೆಚ್ಚುಗೆ ಸೂಚಿಸಿದರು.
ಹರದನಹಳ್ಳಿಯ ಶಾಲೆಯಲ್ಲಿ ತೆರೆಯಲಾಗಿರುವ ಯುವಸೌರಭ ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಮತಗಟ್ಟೆಯ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ವೀಕ್ಷಿಸಿದ ಜಿಲ್ಲಾಧಿಕಾರಿ ಅಲ್ಲಿನ ಸಿದ್ಧತೆಗಳನ್ನು ಪರೀಶೀಲಿಸಿದರು. ಬಳಿಕ ಅಲ್ಲಿಯೇ ಇದ್ದ ಯುವ ಮತದಾರರನ್ನು ಕುಶಲೋಪರಿ ವಿಚಾರಿಸಿ ಮಾತನಾಡಿಸಿದರು. ಮೊದಲ ಬಾರಿ ಮತದಾನ ಮಾಡುತ್ತಿರುವ ಯುವ ಮತದಾರರನ್ನು ಕಡ್ಡಾಯ ಹಾಗೂ ನೈತಿಕ ಮತದಾನ ಬೆಂಬಲಿಸುವಂತೆ ಪ್ರೇರೇಪಿಸಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ 22-ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿಯು ವಿಶೇಷ ಕಾಳಜಿ ವಹಿಸಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ವಿಶಿಷ್ಟ, ವಿಭಿನ್ನ ಹಾಗೂ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರ ಭಾಗವಾಗಿ ವಿಶೇಷ ಮತಗಟ್ಟೆಗಳ ಸ್ಥಾಪನೆಯು ಒಂದಾಗಿದೆ.ಕಳೆದ ಬಾರಿ 2019ರ ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಶೇ.75.22 ರಷ್ಟು ಮತದಾನವಾಗಿತ್ತು. ಪ್ರಸ್ತುತ ಈ ಬಾರಿಯ ಚುನಾವಣೆಯಲ್ಲಿ ಶೇ. 90ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಮತದಾರರನ್ನು ಪ್ರೇರೇಪಿಸಲು ಜಿಲ್ಲಾ ಸ್ವೀಪ್ ಸಮಿತಿ ಹತ್ತು-ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾರರನ್ನು ಆಕರ್ಷಿಸುವ ಹಾದಿಯಲ್ಲಿ ಮುನ್ನೆಡೆದಿದೆ. ಈ ಮತದಾನ ಜಾಗೃತಿ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತವು ಸಹ ಅಗತ್ಯ ಸಹಕಾರ ನೀಡಿದೆ.
ಜಿಲ್ಲೆಯಲ್ಲಿ 18 ವರ್ಷ ತುಂಬಿದ ನೂತನ ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಯುವಸೌರಭ ಮತಗಟ್ಟೆಗಳು, ಮಹಿಳೆಯರನ್ನು ಮತದಾನಕ್ಕಾಗಿ ಪ್ರೇರೇಪಿಸಲು ಸಖಿಸೌರಭ ಮತಗಟ್ಟೆಗಳು, ದೇಶದ ಬೆನ್ನೆಲುಬಾದ ರೈತರನ್ನು ಮತಗಟ್ಟೆಗೆ ಸೆಳೆಯಲು ಅನ್ನದಾತರ ಮತಗಟ್ಟೆಗಳು, ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳ ಮಹತ್ವ ಸಾರುವ ಸಾಂಪ್ರಾದಾಯಿಕ ಮತಗಟ್ಟೆಗಳು, ಜಿಲ್ಲೆಯಲ್ಲಿ ಶೇ.54ರಷ್ಟು ಅರಣ್ಯ ಪ್ರದೇಶವಿದ್ದು, ಅರಣ್ಯದ ಕುರಿತು ಅರಿವು ಮೂಡಿಸುವ ಹಸಿರು ಮತಗಟ್ಟೆಗಳು, ಬುಡಕಟ್ಟು ಜನರಿಗೆ ಮತದಾನದ ಪ್ರಾಮುಖ್ಯತೆ ತಿಳಿಸಲು ಬುಡಕಟ್ಟು ಮತಗಟ್ಟೆಗಳು, ವಿಶೇಷಚೇತನರನ್ನು ಅಗತ್ಯ ಸೌಲಭ್ಯ ಕಲ್ಪಿಸಿ ಮುಖ್ಯವಾಹಿನಿಗೆ ತರುವ ಸಲುವಾಗಿ ವಿಶೇಷಚೇತನರ ಮತಗಟ್ಟೆಗಳನ್ನು ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿದೆ.ಮತದಾನಕ್ಕೆ ಆಧಾರ್, ಪ್ಯಾನ್ ಕಾರ್ಡ್, ಬಳಸಬಹುದು
ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ 22-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಏ.26 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಗುರುತಿಗಾಗಿ ಮತದಾರರ ಗುರುತಿನ ಚೀಟಿಯನ್ನು ನೀಡಿ ಮತದಾನ ಮಾಡಬಹುದಾಗಿದೆ. ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಹಾಜರುಪಡಿಸಲು ಸಾಧ್ಯವಾಗದಿದ್ದಲ್ಲಿ ಈ ಕೆಳಕಂಡ ದಾಖಲೆಗಳ ಪೈಕಿ ಯಾವುದಾದರು ಒಂದು ದಾಖಲಾತಿಯನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ. ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯಲ್ಲಿ ತೆರೆಯಲಾದ ಖಾತೆಯ ಭಾವಚಿತ್ರವುಳ್ಳ ಪಾಸ್‌ಪುಸ್ತಕದ ಪ್ರತಿ, ಕಾರ್ಮಿಕ ಇಲಾಖೆಯ ಯೋಜನೆಯಡಿ ನೀಡಿದ ಭಾವಚಿತ್ರವುಳ್ಳ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ಭಾವಚಿತ್ರವುಳ್ಳ ಚಾಲನಪರವಾನಗಿ, ಭಾವಚಿತ್ರವುಳ್ಳ ಪ್ಯಾನ್ ಕಾರ್ಡ್, ಎನ್.ಪಿ.ಆರ್. ಅಡಿಯಲ್ಲಿ ಆರ್.ಜಿ.ಐ ನೀಡಿದ ಭಾವಚಿತ್ರವುಳ್ಳ ಸ್ಮಾರ್ಟ್ ಕಾರ್ಡ್, ಭಾವಚಿತ್ರವುಳ್ಳ ಇಂಡಿಯನ್ ಪಾಸ್‌ಪೋರ್ಟ್, ಭಾವಚಿತ್ರವುಳ್ಳ ಪಿಂಚಣಿ ಆದೇಶ ಪ್ರತಿ, ಕೇಂದ್ರ, ರಾಜ್ಯ, ಸಾರ್ವಜನಿಕ ಸೇವಾ ವಲಯಗಳು, ಸಾರ್ವಜನಿಕ ಸಂಸ್ಥೆಗಳ ವತಿಯಿಂದ ನೀಡಿರುವ ಭಾವಚಿತ್ರವುಳ್ಳ ಸೇವಾ ಗುರುತಿನ ಚೀಟಿ, ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಂದ ನೀಡಲಾಗಿರುವ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ, ಭಾರತ ಸರ್ಕಾರ ರವರ ವತಿಯಿಂದ ನೀಡಿರುವ ಭಾವಚಿತ್ರವುಳ್ಳ ವಿಶೇಷಚೇತನ ಗುರುತಿನ ಚೀಟಿ (UDID) ಯಂತಹ ಯಾವುದಾದರು ಒಂದು ದಾಖಲಾತಿಯನ್ನು ಹಾಜರು ಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.