ಜನಪದಕ್ಕೆ ವೈವಿಧ್ಯತೆಯೇ ಜೀವಾಳ

KannadaprabhaNewsNetwork | Published : May 6, 2025 12:18 AM

ಸಾರಾಂಶ

ಸಂಶೊಧನೆಗೆ ಗುರಿ, ಸ್ಪಷ್ಟತೆ, ಕ್ರಮಬದ್ಧತೆ, ತಾತ್ವಿಕತೆ ಒಳಗೊಂಡ ಶಿಸ್ತುಬದ್ಧ ಅಧ್ಯಯನ ನಡೆಯಬೇಕು.

ಶಿಗ್ಗಾಂವಿ: ಜನಪದ ಎಂಬುದು ಬದುಕು, ಸಂಸ್ಕೃತಿ, ಮನರಂಜನೆ, ಅಲಕ್ಷಿತ ಸಮುದಾಯಗಳ ಬವಣೆ, ಹಲವು ಕಲಾಪ್ರಕಾರಗಳ ಸಂಗಮವಾಗಿದೆ. ಹೀಗಾಗಿ ಜನಪದಕ್ಕೆ ವೈವಿಧ್ಯತೆಯೇ ಜೀವಾಳವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ತಿಳಿಸಿದರು.

ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಪಿಎಚ್‌ಡಿ ಕೋರ್ಸ್ ವರ್ಕ್ ಕಮ್ಮಟ- ೨೦೨೪- ೨೫ ಉದ್ಘಾಟಿಸಿ ಮಾತನಾಡಿದರು.

ಸಂಶೊಧನೆಗೆ ಗುರಿ, ಸ್ಪಷ್ಟತೆ, ಕ್ರಮಬದ್ಧತೆ, ತಾತ್ವಿಕತೆ ಒಳಗೊಂಡ ಶಿಸ್ತುಬದ್ಧ ಅಧ್ಯಯನ ನಡೆಯಬೇಕು. ಪ್ರಾದೇಶಿಕ ಸಾಂಸ್ಕೃತಿಕ ವೈವಿಧ್ಯತೆ, ಆರ್ಥಿಕತೆ, ಬದುಕು, ಜೀವನ ಮೌಲ್ಯ,ಭಾಷೆ, ಹಳ್ಳಿಗಾಡಿನ ಚರಿತ್ರೆ, ಐತಿಹಾಸಿಕ ತಾರತಮ್ಯ, ವಿಶ್ಲೇಷಣೆ ಹೀಗೆ ಹಲವು ಅಂಶ ಒಳಗೊಂಡ ಮೌಲಿಕ ಸಂಶೋಧನೆ ನಿಮ್ಮದಾಗಲಿ. ಅದು, ಮುಂದಿನ ನಾಗರಿಕ ಸಮಾಜಕ್ಕೆ ದಿಕ್ಸೂಚಿ ಆಗಲಿ ಎಂದು ಹಾರೈಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ ಎಂ ಭಾಸ್ಕರ್ ಮಾತನಾಡಿ, ಸಂಶೋಧನೆ ಎಂಬುದು ಜಟಿಲ ಮತ್ತು ಸಂಕಿರ್ಣವಾಗಿದ್ದು, ಅದರದ್ದೆ ಆದ ಸೌಂದರ್ಯವನ್ನು ಒಳಗೊಂಡಿದೆ ಎಂದರು.

ಸಂಶೋಧನೆ ವ್ಯಕ್ತಿಪೂಜೆಯಲ್ಲ, ಅಲ್ಲಿ ವೈಭವೀಕರಣ ಸಲ್ಲದು. ಸಿದ್ಧ ಮಾದರಿಗೂ ಅಲ್ಲಿ ಅವಕಾಶ ಇಲ್ಲ. ಹೀಗಾಗಿ ಸಂಶೋಧನೆ ಪಾರದರ್ಶಕ, ಸ್ಪಷ್ಟ ಗುರಿ, ಉದ್ದೇಶ, ಹೊಸ ಜ್ಞಾನದ ವಿಸ್ತಾರ, ಸತ್ಯದ ಸಾಕ್ಷಾತ್ಕಾರಕ್ಕೆ ಪೂರಕವಾಗಿರಬೇಕು ಎಂದರು.

ಇದೇ ಸಂದರ್ಭದಲ್ಲಿ ನವೋದಯ, ಪ್ರಗತಿಶೀಲ, ದಲಿತ, ಬಂಡಾಯ, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಲ್ಲಿ ಸಂಶೋಧನೆಯ ಪಾತ್ರವನ್ನು ಮೆಲುಕು ಹಾಕಿದ ಕುಲಪತಿಗಳು, ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಈ ಸಂಶೋಧನಾ ಕಮ್ಮಟ ದಾಖಲಾಗಲಿದೆ ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್‌ ಮಾತನಾಡಿ, ಜಾನಪದ ವಿಶ್ವವಿದ್ಯಾಲಯ ಸಂಶೋಧನೆ, ದಾಖಲೀಕರಣ, ಸಂವರ್ಧನೆಗೆ ಪ್ರಾಮುಖ್ಯತೆ ನೀಡುತ್ತಿದೆ. ಜಾನಪದ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಸಂಕಲ್ಪ ತೊಟ್ಟಿದ್ದು, ಆ ನಿಟ್ಟಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರೊಂದಿಗೆ ಪಿಎಚ್‌ಡಿ ಸಂಶೋಧನಾರ್ಥಿಗಳು ನಡೆಸಿದ ಸಂವಾದ ಅರ್ಥಪೂರ್ಣವಾಗಿತ್ತು. ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ, ಸಹಾಯಕ ಪ್ರಾಧ್ಯಾಪಕರಾದ ಡಾ. ವೆಂಕನಗೌಡ ಪಾಟೀಲ, ಡಾ. ಬಂಡು ಸುರೇಶ ಡಾ. ಬಸವರಾಜ ಚಂದ್ರಕಾಂತ, ಡಾ. ವಿಜಯಲಕ್ಷ್ಮಿ ಗೇಟಿಯವರ, ಡಾ. ಚಂದ್ರಪ್ಪ ಸೊಬಟಿ ಸಹಾಯಕ ಸಂಶೋಧನಾಧಿಕಾರಿ ಡಾ. ಹುಲಗಪ್ಪ ನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article