ಧಾರವಾಡ:
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ತಾಲೂಕಿನ ದಡ್ಡಿಕಮಲಾಪುರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜ. 6ರಿಂದ 10ರ ವರೆಗೆ ನಡೆಯುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್‌ನ್ನು ಯಶಸ್ವಿಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಜಾಂಬೋರೇಟ್‌ಗೆ ಆಗಮಿಸುವ 8 ಜಿಲ್ಲೆಗಳ 1000 ಮಕ್ಕಳಿಗೆ ಹಾಗೂ 200 ಸಿಬ್ಬಂದಿಗೆ ಮೂಲಭೂತ ಸೌಲಭ್ಯ ಒದಗಿಸಿ ವ್ಯವಸ್ಥಿತವಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿ ಯಶಸ್ವಿಗೊಳಿಸಬೇಕು. ಶಾಲಾ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳು ಭಾರತ ಸ್ಕೌಟ್ಸ್, ಗೈಡ್ಸ್, ರೇಂಜರ್ಸ್ ಮತ್ತು ರೋವರ್ಸ್ ಮಕ್ಕಳು ಭಾಗವಹಿಸುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.
ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆ, ಸುರಕ್ಷತೆ ಬಗ್ಗೆ ಆರಕ್ಷಕರು, ಸಾರಿಗೆಗಾಗಿ ಸಾರಿಗೆ ಸಂಸ್ಥೆ ಸಿಬ್ಬಂದಿ, ನಿರಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ, ಜಲಮಂಡಳಿ, ಹೆಸ್ಕಾಂ, ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮ ನಿರ್ವಹಿಸಬೇಕೆಂದು ಸೂಚಿಸಿದರು.ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಶ್ರೀಶೈಲ ಕರಿಕಟ್ಟಿ, ಕಾರ್ಯಕ್ರಮದ ರೂಪರೇಷೆ ತಿಳಿಸಿದರು. ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಿಡಿಪಿಯು ಸುರೇಶ, ಜಿಲ್ಲಾ ಖಜಾಂಚಿ ಬಸವರಾಜ ಕಡಕೋಳ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಎಸ್.ಐ. ನೇಕಾರ, ಜಿಲ್ಲಾ ರೋವರ್ ಆಯುಕ್ತ ಡಿ.ಡಿ. ಮಾಳಗಿ, ಸ್ಥಾನಿಕ ಆಯುಕ್ತ ಎಸ್.ವಿ. ಮೊರಬ, ಕಾಂಬಳೆ, ನಿವೃತ್ತ ಶಿಕ್ಷಣಾಧಿಕಾರಿ ವ್ಹಿ.ವ್ಹಿ. ಕಟ್ಟಿ, ಸಹಾಯಕ ಆಯುಕ್ತ ಮಂಜುನಾಥ ಅಡಿವೇರ, ಎಂ.ಎಸ್. ಶಿವಳ್ಳಿಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.