ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ

KannadaprabhaNewsNetwork | Published : Sep 4, 2024 1:46 AM

ಸಾರಾಂಶ

ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ

ಕನ್ನಡಪ್ರಭ ವಾರ್ತೆ ಮೈಸೂರು

ಸಹಕಾರ ಸಂಘಗಳು ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಮೈಸೂರು ವಿಭಾಗ ಕಚೇರಿಯ ವ್ಯವಸ್ಥಾಪಕ ಆರ್.ಎಸ್. ಸುರೇಶ್ ತಿಳಿಸಿದರು.ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಭೀಮ ಜ್ಯೋತಿ ಸೌಹಾರ್ದ ಸಹಕಾರಿ ನಿಯಮಿತ 2023- 24ನೇ ಸಾಲಿನ ನಾಲ್ಕನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಸಹಕಾರ ಕ್ಷೇತ್ರದ ವ್ಯಾಪ್ತಿಯು ವಿಸ್ತರಿಸಿದ್ದು, ಸಂಘದ ಸದಸ್ಯರಲ್ಲಿ ಸಹಕಾರ ತತ್ವ, ಮಿತವ್ಯಯ, ಉಳಿತಾಯ, ಸಹಭಾಗಿತ್ವ, ಸಾಮಾಜಿಕ ಜವಬ್ದಾರಿಗಳನ್ನು ಮೂಡಿಸಿದೆ ಎಂದರು.ಸರ್ಕಾರೇತರ ಸಂಸ್ಥೆಗಳಾಗಿರುವ ಸೌಹಾರ್ದ ಸಹಕಾರ ಸಂಘಗಳು, ದೇಶದ ಆರ್ಥಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿ, ಆರ್ಥಿಕ ಸಬಲತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಿಂದುಳಿದ, ಶೋಷಿತ ಸಮುದಾಯದ ಪ್ರಗತಿಗೆ, ಜಾಗೃತಿಗೆ ಸಂಘಟನೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.ಆಡಳಿತ ಮಂಡಳಿಯು ಹೆಚ್ಚು ಕ್ರಿಯಾಶೀಲವಾಗಿ, ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು, ಸೊಸೈಟಿಯ ಸದಸ್ಯರು ಸಹಕಾರ, ಬೆಂಬಲ ತುಂಬಾ ಅಗತ್ಯ. ಸದಸ್ಯರು ಸಕಾಲಕ್ಕೆ ಸಾಲವನ್ನು ಪಾವತಿಸಿದಲ್ಲಿ ಸಂಘಗಳು ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ, ನಷ್ಟ ಉಂಟಾಗದಂತೆ ಎಚ್ಚರಿಕೆ ವಹಿಸಿ ಲಾಭದತ್ತ ಕೊಂಡೊಯ್ಯುವ ಜವಬ್ದಾರಿ ಆಡಳಿತ ಮಂಡಳಿಯ ಮೇಲಿದೆ ಎಂದರು.ಸೊಸೈಟಿಯ ಅಧ್ಯಕ್ಷ ಆರ್. ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಎನ್. ಬಸವರಾಜು, ಪೋಷಕರಾದ ಪಿ.ಎ. ಕುಮಾರ್, ನಿವೃತ್ತ ಇಂಜಿನಿಯರ್ ಎನ್. ಶ್ರೀನಿವಾಸಲು, ಮುಖಂಡರಾದ ಮುನಿಸ್ವಾಮಿ, ಮರಿಸ್ವಾಮಿ, ಸೊಸೈಟಿಯ ಮಾಜಿ ಅಧ್ಯಕ್ಷರಾದ ತಿಪ್ಪಯ್ಯ, ವಸಂತಾ, ಸಹಕಾರಿಯ ನಿರ್ದೇಶಕರಾದ ಎನ್. ಆನಂದಪ್ಪ, ಡಿ.ಪಿ. ಮಂಜುನಾಥ್, ಎನ್. ಜಯರಾಮ್, ತಿಪ್ಪಯ್ಯ, ಎಚ್. ಧರ್ಮರಾಜು, ಕಾರ್ಯದರ್ಶಿ ಎ.ಸಿ. ಜ್ಯೋತಿ ಇದ್ದರು. ಹನುಮಂತು ಪ್ರಾರ್ಥಿಸಿದರು.

Share this article