ಕನ್ನಡಪ್ರಭ ವಾರ್ತೆ ಮೈಸೂರು
ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಮಾತನಾಡಿ, 2023-24ನೇ ಸಾಲಿನ ವಿಭಾಗದ ಸಾಧನೆಗಳ ಕುರಿತು ತಿಳಿಸಿದ ಅವರು, ಮೈಸೂರು ವಿಭಾಗವು ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಅಂತರ-ವಿಭಾಗ ರಾಜಭಾಷಾ ಮತ್ತು ಉಳಿಕೆ ವಸ್ತುಗಳ ನಿರ್ವಹಣೆಯಲ್ಲಿನ ಕಾರ್ಯಕ್ಷಮತೆಯಂತಹ ಹಲವು ವಿಭಾಗಗಳಲ್ಲಿ ದಕ್ಷತೆಯ ಫಲಕ ಪಡೆದಿದೆ ಎಂದರು.
ಇದೇ ವರ್ಷ ಜನವರಿಯಲ್ಲಿ ಹುಬ್ಬಳ್ಳಿಯ ಪ್ರಧಾನ ಕಚೇರಿಯಲ್ಲಿ ನಡೆದ ‘ವಿಶಿಷ್ಟ ರೈಲು ಸೇವಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಮುಖ ನಿಲ್ದಾಣಗಳ ವಿಭಾದದಲ್ಲಿ ಮೈಸೂರು ರೈಲು ನಿಲ್ದಾಣವು ಅತ್ಯುತ್ತಮ ನಿರ್ವಹಣೆಯ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ. ಹಾಗೆಯೇ ಬಾಗೇಶಪುರ ರೈಲು ನಿಲ್ದಾಣವು ಪೂರ್ತಿ ನೈಋತ್ಯ ರೈಲ್ವೆಯಲ್ಲಿಯೇ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಸಣ್ಣ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಎಂದರು.ಅಲ್ಲದೆ ಜ. 23 ರಂದು ನಡೆದ ವಿಶಿಷ್ಟ ರೈಲು ಸೇವಾ ಪುರಸ್ಕಾರ ಸಮಾರಂಭದಲ್ಲಿ ಮೈಸೂರು ವಿಭಾಗದ ಏಳು ಉದ್ಯೋಗಿಗಳನ್ನು ವಲಯ ಮಟ್ಟದಲ್ಲಿ ಅವರ ಪ್ರತಿಭಾನ್ವಿತ ಸೇವೆಗಾಗಿ ಶ್ಲಾಘಿಸಿ ಪ್ರಶಸ್ತಿ ನೀಡಲಾಯಿತು.
ಸರಕು ಸಾಗಣೆ ಆದಾಯ 907.91 ಕೋಟಿ ಆಗಿದ್ದೂ, ಹಿಂದಿನ ವರ್ಷದ ಅತ್ಯಧಿಕ ಗಳಿಕೆಯ ದಾಖಲೆ ಮುರಿದು ಮೀರಿಸಿದೆ. ಹಿಂದಿನ ಪೂರ್ಣ ಆರ್ಥಿಕ ವರ್ಷದ ಅತ್ಯಧಿಕ ಗಳಿಕೆಯ 897.28 ಕೋಟಿಯನ್ನು ಒಂದು ತಿಂಗಳ ಮುಂಚಿತವಾಗಿ ಮೀರಿಸಿದೆ. ಒಟ್ಟಾರೆ ಆದಾಯ ಕೂಡ ಅತ್ಯಧಿಕ 1330.17 ಕೋಟಿಗಳಾಗಿದ್ದೂ, ಹಿಂದಿನ 2022-23ರ ಪೂರ್ಣ ಹಣಕಾಸು ವರ್ಷದ ಗರಿಷ್ಠವಾದ 1304.91 ಕೋಟಿ ರೂ.ಗಳನ್ನು ಕೇವಲ 334 ದಿನಗಳಲ್ಲಿ ಮೀರಿಸಿದೆ.
2022-23ರ ಆರ್ಥಿಕ ವರ್ಷದಲ್ಲಿನ ಅಸಾಧಾರಣ ಕಾರ್ಯಕ್ಷಮತೆ ತೋರಿದ ಅತ್ಯುತ್ತಮ ಉದ್ಯೋಗಿಗಳಿಗೆ ಪ್ರಶಸ್ತಿ ನೀಡಿದರು. ಅಂತೆಯೇ ರೈಲ್ವೆಗೆ ಅನುಕರಣೀಯ ಕೊಡುಗೆ ನೀಡಿದ ಒಟ್ಟು 22 ಪರಿಶ್ರಮಿ ಸಿಬ್ಬಂದಿಗೆ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.