ಯಲ್ಲಾಪುರ: ನಿಸ್ವಾರ್ಥ ಕಲಾ ಸೇವಕರಿಗೆ ಗೌರವ ಸಮರ್ಪಣೆ, ''''''''ದಿವ್ಯ ದೀವಟಿಗೆ'''''''' ಪುಸ್ತಕ ಲೋಕಾರ್ಪಣೆ ಹಾಗೂ ಗಾನ ಸಂಜೆ ಕಾರ್ಯಕ್ರಮವನ್ನು ಡಿ. ೨೯ರಂದು ಮಧ್ಯಾಹ್ನ ೩ಕ್ಕೆ ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಲಾ ಸನ್ನಿಧಿ ಅಧ್ಯಕ್ಷ ಶ್ರೀಧರ ಭಟ್ಟ ಅಣಲಗಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೇ, ಪ್ರಶಸ್ತಿ, ಪ್ರಚಾರದ ಹಂಗಿಲ್ಲದೇ ಕಲಾಸೇವೆ ಮಾಡಿದ ಕಲಾವಿದರು ಹಲವರಿದ್ದಾರೆ. ಅಂತಹ ಕಲಾವಿದರನ್ನು ಸಂದರ್ಶಿಸಿ, ಲೇಖನಗಳ ಮೂಲಕ ಅವರ ಕಲಾ ಸೇವೆಯನ್ನು ಜಾಲತಾಣಗಳಲ್ಲಿ ಪರಿಚಯಿಸುವ ಕಾರ್ಯವನ್ನು ಸಂಸ್ಥೆ ನಾಲ್ಕು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಸಂದರ್ಶಿತ ಕಲಾವಿದರ ಸಂಖ್ಯೆ ೫೦ ತಲುಪಿದಾಗ ಕಳೆದ ವರ್ಷ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿ, ಗೌರವ ಸಮರ್ಪಿಸಿದ್ದೆವು. ಆ ಎಲ್ಲ ಲೇಖನಗಳ ಸಂಗ್ರಹವನ್ನು ಇದೀಗ ''''''''ದಿವ್ಯ ದೀವಟಿಗೆ'''''''' ಎಂಬ ಪುಸ್ತಕದ ರೂಪದಲ್ಲಿ ಹೊರತರಲಾಗಿದೆ ಎಂದರು.ಲೇಖನ ಸರಣಿ ಮುಂದುವರಿದಿದ್ದು, ಈ ಬಾರಿ ೪೫ ಕಲಾವಿದರನ್ನು ಸಂದರ್ಶಿಸಿ ಲೇಖನ ಪ್ರಕಟಿಸಲಾಗಿದೆ. ಈ ೪೫ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಡಿ. ೨೯ರಂದು ಆನಗೋಡ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಉದ್ಘಾಟಿಸಲಿದ್ದು, ಕರ್ನಾಟಕ ಕಲಾ ಸನ್ನಿಧಿಯ ಕೋಶಾಧ್ಯಕ್ಷ ದಿನೇಶ ಭಟ್ಟ ಯಲ್ಲಾಪುರ ಅಧ್ಯಕ್ಷತೆ ವಹಿಸುವರು.
''''''''ದಿವ್ಯ ದೀವಟಿಗೆ'''''''' ಪುಸ್ತಕವನ್ನು ಕಲಾವಿದ, ಪ್ರಾಧ್ಯಾಪಕ ವಿ. ವಿನಾಯಕ ಭಟ್ಟ ಶೇಡಿಮನೆ ಲೋಕಾರ್ಪಣೆಗೊಳಿಸಲಿದ್ದಾರೆ. ಬರಹಗಾರ ದತ್ತಾತ್ರೇಯ ಕಣ್ಣಿಪಾಲ ಪುಸ್ತಕ ಪರಿಚಯಿಸಲಿದ್ದಾರೆ. ದೇವಸ್ಥಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ, ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಕಲಾವಿದ ಶ್ರೀವತ್ಸ ಗುಡ್ಡೆದಿಂಬ ಅವರಿಗೆ ಕಲಾಸನ್ನಿಧಿ ಪುರಸ್ಕಾರ ನೀಡಿ, ಗೌರವಿಸಲಾಗುವುದು. ಆನಂತರ ಸ್ಥಳೀಯ ಕಲಾವಿದರಿಂದ ಗಾನಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.ಸಂಸ್ಥೆಯ ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ, ಸಹ ಕಾರ್ಯದರ್ಶಿ ದಿನೇಶ ಗೌಡ ಮಾವಿನಮನೆ ಇದ್ದರು.