ಕಾಂಗ್ರೆಸ್ ಕರೆದರೂ ದಿವಾಕರ್ ಕಿವಿಗೊಡಲಿಲ್ಲ; ಜನಾರ್ದನ ರೆಡ್ಡಿ

KannadaprabhaNewsNetwork |  
Published : Oct 24, 2024, 12:53 AM ISTUpdated : Oct 24, 2024, 12:54 AM IST
ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾತನಾಡಿದರು.  | Kannada Prabha

ಸಾರಾಂಶ

ಈ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ.

ಬಳ್ಳಾರಿ: ಸಂಡೂರು ಉಪ ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ ಎಂದು ಬೇಸರಗೊಂಡಿದ್ದ ಕೆ.ಎಸ್. ದಿವಾಕರ್ ಅವರನ್ನು ಕಾಂಗ್ರೆಸ್‌ನವರು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ದಿವಾಕರ್ ಕಾಂಗ್ರೆಸ್‌ ನಾಯಕರ ಫೋನ್ ರಿಸೀವ್ ಮಾಡಿಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್. ದಿವಾಕರ್ ಪಕ್ಷ ನಿಷ್ಠೆಯನ್ನು ಬಿಟ್ಟುಕೊಟ್ಟಿಲ್ಲ. ಈ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ. ಅವರನ್ನು ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಇತಿಹಾಸದಲ್ಲಿಯೇ ರಾಜ್ಯ ಕಾರ್ಯದರ್ಶಿಯಂತಹ ದೊಡ್ಡ ಹುದ್ದೆಯನ್ನು ದಿವಾಕರ್ ಅವರಿಗೆ ಪಕ್ಷ ನೀಡಿದೆ. ಇದು ಶಾಸಕ ಸ್ಥಾನಕ್ಕಿಂತಲೂ ದೊಡ್ಡದು ಎಂಬುದು ನನ್ನ ಭಾವನೆ ಎಂದರು.

ಸಂಡೂರು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಬಾಲ್ಯದಿಂದಲೇ ಬಿಜೆಪಿಯ ಧ್ವಜ ಹಿಡಿದು ಓಡಾಡಿಕೊಂಡಿದ್ದವರು. 1999ರಲ್ಲಿ ಸುಷ್ಮಾಸ್ವರಾಜ್ ಬಳ್ಳಾರಿಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಿಂದಲೂ ಬಂಗಾರು ಹನುಮಂತು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷಕ್ಕಾಗಿ ಬಂಗಾರು ಹನುಮಂತು ಸಾಕಷ್ಟು ಶ್ರಮಿಸಿದ್ದಾರೆ. ಅವರ ಪಕ್ಷ ನಿಷ್ಠೆ ಹಾಗೂ ಆತನ ಸಂಘಟನಾ ಶಕ್ತಿಯನ್ನು ಗುರುತಿಸಿಯೇ ಪಕ್ಷ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷನನ್ನಾಗಿ ಮಾಡಿದೆ ಎಂದು ಜನಾರ್ದನ ರೆಡ್ಡಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಕಾರ್ಯಕರ್ತರ ಜಮಾವಣೆ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಕೆ.ಎಸ್. ನವೀನಕುಮಾರ್, ಸಂಡೂರು ಉಪ ಚುನಾವಣೆಗೆ ನಾಲ್ಕು ಮುಖಂಡರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಗೋವಿಂದ ಕಾರಜೋಳ, ಸುನೀಲ್‌ಕುಮಾರ್, ರವಿಕುಮಾರ್ ಹಾಗೂ ನಾನು ಉಸ್ತುವಾರಿಯಾಗಿ ಕಳೆದ ಎರಡು ತಿಂಗಳಿನಿಂದ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಸಂಡೂರು ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿರುವ ತುಕಾರಾಂ ವಿರುದ್ಧ ದೊಡ್ಡ ಅಲೆಯೇ ಸೃಷ್ಟಿಯಾಗಿದೆ. ನಮ್ಮ ಅಭ್ಯರ್ಥಿಯ ಗೆಲುವಿಗಾಗಿ ದೊಡ್ಡ ತಂಡವನ್ನೇ ರಚನೆ ಮಾಡಿಕೊಂಡಿದ್ದೇವೆ. ಅ.25ರಂದು ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಾಗಲಿದ್ದು, ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಲಿದ್ದಾರೆ. ಉಪ ಚುನಾವಣೆಯ ಟಿಕೆಟ್ ವಂಚಿತ ಕೆ.ಎಸ್.ದಿವಾಕರ್ ಅವರಿಗೆ ಪಕ್ಷ ಗುರುತಿಸಿ, ಸೂಕ್ತ ಸ್ಥಾನಮಾನ ಕಲ್ಪಿಸಲಿದೆ ಎಂದರು.

ಟಿಕೆಟ್ ಕೈ ತಪ್ಪಿದ್ದರಿಂದ ತೀವ್ರ ಬೇಸರವಾಗಿತ್ತು. ಪಕ್ಷದ ಹಿರಿಯ ನಾಯಕರು ಹಾಗೂ ಜನಾರ್ದನ ರೆಡ್ಡಿ ಅವರ ಸಲಹೆಯಂತೆ ಈ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಮುಂದಿನ ದಿನಗಳಲ್ಲಿ ಖಂಡಿತ ನ್ಯಾಯ ಸಿಗಲಿದೆ ಎಂಬ ಭರವಸೆಯಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಕೆ.ಎಸ್.ದಿವಾಕರ್ ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಪಕ್ಷದ ಮುಖಂಡರಾದ ಶರಣು ತಳ್ಳಿಕೆರೆ, ಎಚ್‌.ಹನುಮಂತಪ್ಪ, ಮುರಹರಗೌಡ ಗೋನಾಳ್, ಯರ್ರಂಗಳಿ ತಿಮ್ಮಾರೆಡ್ಡಿ, ಗೋನಾಳ್ ವಿರುಪಾಕ್ಷಗೌಡ, ಗಣಪಾಲ್ ಐನಾಥರೆಡ್ಡಿ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ