ಬಲಿಪಾಢ್ಯೆ ಪೂಜೆಯೊಂದಿಗೆ ಮುಗಿದ ದೀಪಾವಳಿ ಆಚರಣೆ

KannadaprabhaNewsNetwork |  
Published : Nov 16, 2023, 01:15 AM IST
15ಡಿಡಬ್ಲೂಡಿ10ಧಾರವಾಡ ತಾಲೂಕಿನ ಮನಗುಂಡಿಯಲ್ಲಿ ದೀಪಾವಳಿ ನಿಮಿತ್ತ ನಡೆದ ಎತ್ತುಗಳ ಕಾದಾಟ | Kannada Prabha

ಸಾರಾಂಶ

ದೀಪಾವಳಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಹಬ್ಬದ ವಾತಾವರಣ ಸಾಕಷ್ಟು ಸಂಭ್ರಮದಿಂದ ಕೂಡಿತ್ತು. ದೀಪಾವಳಿ ಪಾಡ್ಯ ದಿನವನ್ನು ‘ಹಟ್ಟಿ ಹಬ್ಬ’ ಎಂದೇ ಆಚರಿಸುವುದು ವಾಡಿಕೆ. ಅದರಂತೆ ಜನರು ತಮ್ಮ ಮನೆಯಲ್ಲಿ ಹಟ್ಟಿ ಲಕ್ಕವ್ವಳನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ದೀಪಾವಳಿ ಹಬ್ಬದ ಹಲವು ಸಂಪ್ರದಾಯಗಳ ಪೈಕಿ ಬಲಿಪಾಢ್ಯೆ ದಿನದ ಸಂಪ್ರದಾಯ ಹಾಗೂ ಆಚರಣೆ ವಿಶೇಷವೇ ಬೇರೆ. ದೀಪಾವಳಿ ಎಂದರೆ ಬಲಿಪಾಢ್ಯೆ ಎಂದೇ ಕರೆಯುತ್ತಾರೆ. ಅಂತಹ ಬಲಿಪಾಡ್ಯೆ ದಿನ ಧಾರವಾಡದಲ್ಲಿ ಸಂಭ್ರಮದಿಂದ ಮಂಗಳವಾರ ನಡೆಯಿತು.

ದೀಪಾವಳಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಹಬ್ಬದ ವಾತಾವರಣ ಸಾಕಷ್ಟು ಸಂಭ್ರಮದಿಂದ ಕೂಡಿತ್ತು. ದೀಪಾವಳಿ ಪಾಡ್ಯ ದಿನವನ್ನು ‘ಹಟ್ಟಿ ಹಬ್ಬ’ ಎಂದೇ ಆಚರಿಸುವುದು ವಾಡಿಕೆ. ಅದರಂತೆ ಜನರು ತಮ್ಮ ಮನೆಯಲ್ಲಿ ‘ಹಟ್ಟಿ ಲಕ್ಕವ್ವಳ’ನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.

ತಾಲೂಕಿನ ಯಾದವಾಡ, ಕಲಕೇರಿ, ನಿಗದಿ, ನುಗ್ಗಿಕೇರಿ, ಮನಗುಂಡಿ, ಯರಿಕೊಪ್ಪ, ಹಳ್ಳಿಕೇರಿ, ಜೋಗೆಲ್ಲಾಪುರ, ಅಮ್ಮಿನಬಾವಿ, ಮನಸೂರು, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಪ್ರಭುನಗರ, ಹೊನ್ನಾಪುರ, ದೇವರಹುಬ್ಬಳ್ಳಿ, ಅಳ್ನಾವರ ಸೇರಿದಂತೆ ವಿವಿಧೆಡೆ ಮನೆಗಳಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು.

ಹಟ್ಟಿ ಲಕ್ಕವ್ವಳ ಪೂಜೆ ನೆರವೇರಿಸಿದ ನಂತರದಲ್ಲಿ ಒಕ್ಕಲುತನದ ಕೆಲಸಗಳನ್ನು ಮಾಡಲು ಅತ್ಯಂತ ಶ್ರೇಷ್ಠವಾದದ್ದು ಎಂಬುದು ಗ್ರಾಮೀಣ ಜನರಲ್ಲಿನ ನಂಬಿಕೆ. ಹೀಗಾಗಿ ಇಂದಿಗೂ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಬಲಿಪಾಡ್ಯ ಮುನ್ನಾದಿನ ಮನೆಯಲ್ಲಿ ಆಕಳಿನ ಸಗಣಿ ಬಳಸಿ ತಾಯ್ತನಕ್ಕೆ ಹೆಸರುವಾಸಿಯಾದ ಹಟ್ಟಿ ಲಕ್ಕವ್ವಳ ಹಾಗೂ ಆಕೆ ಮಕ್ಕಳ ಪ್ರತಿಕೃತಿ ಪ್ರತಿಷ್ಠಾಪಿಸುತ್ತಾರೆ. ನಂತರ ಪ್ರತಿಕೃತಿಗಳನ್ನು ಕಬ್ಬು, ಬಾಳೆ, ಮಾವಿನ ತೋರಣ, ವಿವಿಧ ವಸ್ತುಗಳಿಂದ ಅಲಂಕರಿಸಿ, ಸಿಹಿ ಭೋಜನ ತಯಾರಿಸಿ ನೈವೇದ್ಯ ಅರ್ಪಿಸಿದ ಕುಟುಂಬಸ್ಥರು ಸಾಮೂಹಿಕ ಭೋಜನ ಸವಿದರು.

ವಿಶೇಷ ಪೂಜೆ

ಮಲೆನಾಡಿನಲ್ಲಿ ಪಾಢ್ಯೆ ದಿನ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮನೆಯಲ್ಲಿನ ಎತ್ತುಗಳ ಮೈಗೆ ಬಣ್ಣ ಬಳಿದು, ಕೋಡುಗಳಿಗೆ ರಿಬ್ಬನ್, ಬಲೂನ್ ಹಾಗೂ ವಿವಿಧ ವಸ್ತುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕಿನ ಮನಗುಂಡಿ ಗ್ರಾಮದ ಬಸ್ ನಿಲ್ದಾಣ ಬಳಿ ಬಯಲು ಜಾಗದಲ್ಲಿ ನಡೆದ ಎತ್ತುಗಳ ಕಾದಾಟ ರೋಮಾಂಚನಕಾರಿಯಾಗಿತ್ತು. 10ಕ್ಕೂ ಹೆಚ್ಚು ಜೋಡಿಗಳು ಕಾಳಗದಲ್ಲಿ ಪರಸ್ಪರ ಕಾದಾಡಿದವು. ಕಾದಾಟ ನೋಡಲು ಬಂದಿದ್ದ ಗ್ರಾಮಸ್ಥರು ಚಪ್ಪಾಳೆ, ಸಿಳ್ಳೆ ಮೂಲಕ ಎತ್ತುಗಳನ್ನು ಹುರಿದುಂಬಿಸಿದರು. ಪೂಜೆ ಬಳಿಕ ಗ್ರಾಮದಲ್ಲಿನ ದೇವಸ್ಥಾನಗಳಿಗೆ ಕರೆದೊಯ್ದು ಮೆರವಣಿಗೆ ನಡೆಸಿದರು. ಇನ್ನು ನಗರದ ಬಹುತೇಕ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಸುಭಾಷ್ ರಸ್ತೆ, ಸೂಪರ್ ಮಾರ್ಕೆಟ್, ಲೈನ್ ಬಜಾರ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿನ ಅಂಗಡಿಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ