ಧಾರವಾಡದಲ್ಲಿ ಸಂಭ್ರಮದ ದೀಪಾವಳಿ ಹಬ್ಬದಾಚರಣೆ

KannadaprabhaNewsNetwork | Published : Nov 4, 2024 12:51 AM
Follow Us

ಸಾರಾಂಶ

69ನೇ ರಾಜ್ಯೋತ್ಸವದ ಜೊತೆಗೂಡಿಯೇ ದೀಪಾವಳಿ ಬಂದಿದ್ದು, ಅಕ್ಟೋಬರ್‌ 31ರಿಂದ ನ. 2ರ ವರೆಗೆ ಮೂರು ದಿನಗಳ ಕಾಲ ದೀಪಾವಳಿ ಮಧ್ಯೆ ನ. 1ರಂದು ರಾಜ್ಯೋತ್ಸವ ಸಹ ಜೊತೆಗೂಡಿ ಹಬ್ಬಕ್ಕೆ ಮತ್ತಷ್ಟು ಕಳೆ ಬಂತು.

ಧಾರವಾಡ: ದೀಪಾವಳಿಯು ಕತ್ತಲೆಯನ್ನು ಹೊಡೆದೊಡಿಸಿ ಬೆಳಕು ಮೂಡಿಸುವ ಹಬ್ಬ ಎಂದು ನಂಬಿದ್ದು, ಪ್ರಸಕ್ತ ವರ್ಷದ ದೀಪಾವಳಿ ಧಾರವಾಡದಲ್ಲಿ ಸಂಭ್ರಮದಿಂದ ಜರುಗಿತು.

ಈ ಬಾರಿಯ ವಿಶೇಷ ಏನೆಂದರೆ, 69ನೇ ರಾಜ್ಯೋತ್ಸವದ ಜೊತೆಗೂಡಿಯೇ ದೀಪಾವಳಿ ಬಂದದ್ದು. ಅಕ್ಟೋಬರ್‌ 31ರಿಂದ ನ. 2ರ ವರೆಗೆ ಮೂರು ದಿನಗಳ ಕಾಲ ದೀಪಾವಳಿ ಮಧ್ಯೆ ನ. 1ರಂದು ರಾಜ್ಯೋತ್ಸವ ಸಹ ಜೊತೆಗೂಡಿ ಹಬ್ಬಕ್ಕೆ ಮತ್ತಷ್ಟು ಕಳೆ ಬಂತು. ಇದಲ್ಲದೇ, ದೀಪಾವಳಿ ರಜೆಗೆ ಭಾನುವಾರೂ ಸೇರ್ಪಡೆಯಿಂದಾಗಿ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು. ರಾಜ್ಯೋತ್ಸವ ಹಾಗೂ ದೀಪಾವಳಿ ನಿಮಿತ್ತ ಧಾರವಾಡ ಪ್ರಮುಖ ವೃತ್ತ, ರಸ್ತೆಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದವು. ನಗರ ಹಾಗೂ ಗ್ರಾಮೀಣದಲ್ಲಿ ಹಬ್ಬದಾಚರಣೆ ಜೋರಾಗಿತ್ತು.

ಮೊದಲ ದಿನ ಗುರುವಾರ ಹಲವು ಮನೆಗಳಲ್ಲಿ ಲಕ್ಷ್ಮೀ ಪೂಜೆಯನ್ನು ಸಂಭ್ರಮದಿಂದ ನಡೆಸಲಾಯಿತು. ಮಹಿಳೆಯರು ಹೊಸ ಸೀರೆಯುಟ್ಟು ಮನೆ ಹಾಗೂ ದೇವಸ್ಥಾನಗಳಲ್ಲಿ ಪೂಜೆ ಮಾಡಿದರು. ಶುಕ್ರವಾರ ಅಮಾವಾಸ್ಯೆ ಹಾಗೂ ಶನಿವಾರ ಪಾಢ್ಯೆ ಪೂಜೆ ನೆರವೇರಿಸಲಾಯಿತು.

ಹಬ್ಬದ ಹಿನ್ನೆಲೆ ಹೊಸ ವಾಹನ ಹಾಗೂ ಗೃಹಪಯೋಗಿ ವಸ್ತುಗಳ ಖರೀದಿ ಜೋರಾಗಿತ್ತು. ಮಾರುಕಟ್ಟೆಯಲ್ಲಿ ಬಟ್ಟೆ, ಆಭರಣ ಅಂಗಡಿ, ವಾಹನಗಳ ಶೋರೂಂಗಳಲ್ಲಿ ಅತ್ಯಧಿಕ ಜನರಿದ್ದರು. ತಮ್ಮ ತಮ್ಮ ಅಂಗಡಿ, ಕಚೇರಿಗಳಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಮೂರೂ ದಿನಗಳ ಕಾಲ ಧಾರವಾಡದ ಮಾರುಕಟ್ಟೆ ಜನರಿಂದ ತುಂಬಿ ತುಳುಕಿತು. ಜ್ಯುಬಿಲಿ ವೃತ್ತ, ಹಳೆ ಎಸ್ಪಿ ಕಚೇರಿ, ಕೋರ್ಟ್‌ ವೃತ್ತ ಹಾಗೂ ಸುಭಾಸ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಹೆಚ್ಚಿನ ವಾಹನಗಳ ಆಗಮನದಿಂದ ಮಾರುಕಟ್ಟೆಯಲ್ಲಿ ವಾಹನಗಳ ಪಾರ್ಕಿಂಗ್‌ ಸಮಸ್ಯೆ ಉಂಟಾಯಿತು.

ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳು, ಮಹಿಳೆಯರು ಒಟ್ಟಾರೆ ಕುಟುಂಬದ ಸದಸ್ಯರು ಪಾಢ್ಯೆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಸಿರು ಪಟಾಕಿ ಮಾತ್ರ ಬಳಸಬೇಕು ಎಂಬ ನಿಯಮ ಅಷ್ಟೇನೂ ಪಾಲನೆಯಾಗಲಿಲ್ಲ. ಸಮಾಧಾನದ ಸಂಗತಿ ಅಂದರೆ ಪಟಾಕಿ ಸಿಡಿಸುವ ವೇಳೆ ಯಾವುದೇ ಅನಾಹುತ ಆಗಲಿಲ್ಲ ಎನ್ನುವುದು. ಹಾಗೆಯೇ, ನೌಕರಿ ರಜೆ ಹಾಕಿ ತಮ್ಮೂರುಗಳಿಗೆ ಆಗಮಿಸಿದವರು ಭಾನುವಾರ ರಾತ್ರಿ ರೈಲು, ಬಸ್ ಹಾಗೂ ಕಾರ್‌ಗಳ ಮೂಲಕ ಮರಳಿ ಬೆಂಗಳೂರು ಹಾಗೂ ಇತರೆಡೆ ಸಂಚಾರ ಬೆಳೆಸಿದರು.