ಜಿಲ್ಲೆಯಾದ್ಯಂತ ದೀಪಾವಳಿ ರಂಗು.... ದೀಪ ಬೆಳಗಿಸಿ ಸಂಭ್ರಮಿಸಿದ ಸಾರ್ವಜನಿಕರು.

KannadaprabhaNewsNetwork | Published : Nov 2, 2024 1:20 AM

ಸಾರಾಂಶ

ಕಳೆದ ಮೂರು ದಿನಗಳಿಂದ ಅವಳಿ ನಗರದಲ್ಲಿ ಹೂವಿನ ವ್ಯಾಪಾರ ಭರ್ಜರಿ

ಗದಗ: ಜಿಲ್ಲಾದ್ಯಂತ ದೀಪಾವಳಿಯ ರಂಗು ಜೋರಾಗಿದ್ದು, ಮನೆ ಮನೆಗಳಲ್ಲಿಯೂ ದೀಪ ಬೆಳಗಿಸುವ ಮೂಲಕ ಬದುಕಿನಲ್ಲಿನ ಅಂಧಕಾರ ಹೊಡೆದೋಡಿಸಿ ಉತ್ತಮ, ನೆಮ್ಮದಿಯ ಬದುಕನ್ನು ದೇವರು ಕಲ್ಪಿಸಲಿ ಎಂದು ಜನರು ಪ್ರಾರ್ಥಿಸಿದರು.

ಶುಕ್ರವಾರ ಬೆಳಗ್ಗೆಯಿಂದಲೇ ಸಾರ್ವಜನಿಕರು ಮಾರುಕಟ್ಟೆಗೆ ಆಗಮಿಸಿ ದೀಪಾವಳಿ ಅಮಾವಾಸ್ಯೆ ಪೂಜೆಗೆ ಬೇಕಾದ ವಸ್ತು ಖರೀದಿಸಿ ಪೂಜೆ ನೆರವೇರಿಸಿ, ಮಧ್ಯಾಹ್ನವೇ ಸಹಕುಟುಂಬ ಪರಿವಾರ ಸಮೇತ ಸಿಹಿ ಭೋಜನ ಸವಿದರು. ಇನ್ನು ಕೆಲವಾರು ಜನ ಶುಕ್ರವಾರ ರಾತ್ರಿ ದೀಪಾವಳಿ ಅಮಾವಾಸ್ಯೆ ಪೂಜೆ ಮಾಡಿದರು.

ಶನಿವಾರ ಬಲಿಪಾಡ್ಯಮಿ ಆಚರಣೆಗೂ ಜಿಲ್ಲೆಗೂ ಜಿಲ್ಲೆಯಾದ್ಯಂತ ತಯಾರಿ ಬಲು ಜೋರಾಗಿಯೇ ನಡೆಯುತ್ತಿದ್ದು, ವ್ಯಾಪಾರಸ್ಥರು ತಮ್ಮ ಅಂಗಡಿಗಳು, ವ್ಯಾಪಾರ ನಡೆಯುವ ಸ್ಥಳಗಳಲ್ಲಿ ಪೂಜೆ ಸಿದ್ಧತೆ ಪೂರ್ಣಗೊಳಿಸಿಕೊಂಡಿದ್ದಾರೆ. ಇದಕ್ಕಾಗಿ ಬೇಕಾಗುವ ಅಗತ್ಯ ವಸ್ತುಗಳ ಖರೀದಿಗೆ ಶುಕ್ರವಾರ ಸಂಜೆಯೂ ಗದಗ ನಗರದ ಮುಖ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಲು ಜೋರಾಗಿತ್ತು.

ಭರ್ಜರಿ ವ್ಯಾಪಾರ ವಹಿವಾಟು:ದೀಪಾವಳಿ ಹಿನ್ನೆಲೆಯಲ್ಲಿ ಗದಗ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸಗಟು ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ಬೃಹತ್ ಪೆಂಡಾಲ್‌ ಹಾಕಿ ಎಲ್ಲ ತರಹದ ಹೂವುಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ಮೂರು ದಿನಗಳಿಂದ ಅವಳಿ ನಗರದಲ್ಲಿ ಹೂವಿನ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತಿದ್ದು, ಕೆಲವೆಡೆ ರೈತರೇ ನೇರವಾಗಿ ತಾವು ಬೆಳೆದ ಹೂವುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.

ರಸ್ತೆಗಳು ಪುಲ್:ಗದಗ ನಗರದ ಮಾರುಕಟ್ಟೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪುಟ್ಟರಾಜರ ಮೂರ್ತಿಯಿಂದ ಕೆ.ಎಚ್. ಪಾಟೀಲ ಮೂರ್ತಿವರೆಗಿನ ದ್ವಿಪಥ ರಸ್ತೆಯಲ್ಲಿ ಒಂದೆಡೆ ಕಬ್ಬು, ಬಾಳೆಕಂಬ, ಮಾವಿನ ತೋರಣಗಳ ಮಾರಾಟ ನಡೆಯುತ್ತಿದ್ದರೆ. ಇನ್ನೊಂದೆಡೆ ಹೂವು, ಹಣ್ಣು, ತರಕಾರಿ ವ್ಯಾಪಾರ, ವರ್ಷಪೂರ್ತಿ ಬಳಸಬಹುದಾದ ಪ್ಲಾಸ್ಟಿಕ್ ಹೂವು, ಮಾಲೆಗಳ ವ್ಯಾಪಾರಕ್ಕಾಗಿ ಪಕ್ಕದ ತಮಿಳುನಾಡಿನಿಂದ ನೂರಾರು ಜನರು ಆಗಮಿಸಿ ಇದೇ ರಸ್ತೆಯಲ್ಲಿಯೇ ವಾಸ್ತವ್ಯ ಹೂಡಿದ್ದು ಅಲ್ಲಿಯೂ ಜೋರಾದ ವ್ಯಾಪಾರ ವಹಿವಾಟು ನಡೆಯಿತು.

ದೀಪಾವಳಿ ಹಿನ್ನೆಲೆಯಲ್ಲಿ ಗದಗ ನಗರಕ್ಕೆ ಅಕ್ಕಪಕ್ಕದ ತಾಲೂಕು ಮತ್ತು ಗ್ರಾಮೀಣ ಪ್ರದೇಶದಿಂದ ಲಕ್ಷಾಂತರ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಆಗಮಿಸಿದ ಹಿನ್ನೆಲೆಯಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗಿ ತೊಂದರೆಯಾಗುವುದನ್ನು ಮನಗಂಡ ಪೊಲೀಸ್ ಇಲಾಖೆ ಅವಳಿ ನಗರದ 5 ಪ್ರಮುಖ ರಸ್ತೆಗಳಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡದೇ ಬ್ಯಾರಿಕೇಡ್ ಅಳವಡಿಸಿದ ಹಿನ್ನೆಲೆಯಲ್ಲಿ ಪಾದಚಾರಿಗಳು, ದ್ವಿಚಕ್ರ ಸವಾರರು ನಿರಾಂತಕವಾಗಿ ಸಂಚರಿಸಲು ಸಾಧ್ಯವಾಯಿತು. ಇನ್ನು ಗ್ರೇನ್ ಮಾರ್ಕೇಟ್ ರಸ್ತೆ, ಹಳೆ ಬಸ್ ನಿಲ್ದಾಣದಿಂದ ಹುಯಿಲಗೋಳ ನಾರಾಯಣರಾವ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರಕ್ಕೂ ಅವಕಾಶ ಕಲ್ಪಿಸದೇ ಕೇವಲ ಪಾದಚಾರಿಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದ್ದು, ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ಸುಗಮ ಸಂಚಾರ ಸಾಧ್ಯವಾಯಿತು.

Share this article