ಮಹೇಶ ಛಬ್ಬಿ
ಕನ್ನಡಪ್ರಭ ವಾರ್ತೆ ಗದಗಬರಗಾಲದ ಸಂಕಷ್ಟದ ದಿನ, ಬೆಲೆ ಏರಿಕೆ ಬಿಸಿಯ ಮಧ್ಯೆಯೂ ಜಿಲ್ಲೆಯಲ್ಲಿ ಬೆಳಕಿನ ಹಬ್ಬಕ್ಕೆ ಸಿದ್ಧತೆ ಭರದಿಂದ ಸಾಗಿದೆ.
ದೀಪಾವಳಿ ಹಿನ್ನೆಲೆಯಲ್ಲಿ ನಗರದ ಬ್ಯಾಂಕ್ ರಸ್ತೆ, ಸ್ಟೇಷನ್ ರಸ್ತೆ, ಟಾಂಗಾಕೂಟ, ನಾಲ್ವಾಡ ಗಲ್ಲಿ ಬಟ್ಟೆ ಅಂಗಡಿಗಳು, ಬಸವೇಶ್ವರ ವೃತ್ತಗಳಲ್ಲಿ ಹಾಗೂ ಬೆಟಗೇರಿ ಮಾರುಕಟ್ಟೆ ಭಾಗದಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ.ಕಬ್ಬು, ಬಾಳೆದಿಂಡು, ಚೆಂಡು ಹೂಗಳು ರೈತರ ಹೊಲಗಳಿಂದ ನೇರವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮಾರುಕಟ್ಟೆಯಲ್ಲೆಲ್ಲಾ ಚೆಂಡು ಹೂ, ಗುಲಾಬಿ, ಮಲ್ಲಿಗೆ, ಶಾವಂತಿಗೆ, ವಿವಿಧ ಬಗೆಯ ಹಣ್ಣುಗಳು, ಲಕ್ಷ್ಮೀ ಮುಖವಾಡಗಳು, ಅಲಂಕಾರಿಕ ವಸ್ತುಗಳು ತುಂಬಿಕೊಂಡಿವೆ. ವಿಶೇಷವಾಗಿ ಬಟ್ಟೆ ಅಂಗಡಿಗಳಂತು ತುಂಬಿ ತುಳುಕುತ್ತಿವೆ. ದೀಪದ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ತರಹದ ಪಣತಿಗಳು ಮಾರುಕಟ್ಟೆಗೆ ಬಂದಿದ್ದು, ಇದರೊಟ್ಟಿಗೆ ವಿದ್ಯುತ್ ಆಧಾರಿತ ಬಗೆ-ಬಗೆಯ ಪ್ಲಾಸ್ಟಿಕ್ ಪಣತಿಗಳೂ ಲಗ್ಗೆ ಇಟ್ಟಿವೆ. ಆದರೆ ಜನರು ಮಾತ್ರ ಮಣ್ಣಿನ ಪಣತಿಗಳಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ.
ಗಗನಕ್ಕೇರಿದ ಬೆಲೆ: ಸಾದಾ ಪಣತಿ ೧೦ ರು.ಗಳಿಂದ ಪ್ರಾರಂಭವಾದರೆ, ವಿವಿಧ ವಿನ್ಯಾಸ ಹೊಂದಿರುವ ಹಾಗೂ ಆಕರ್ಷಕ ಪಣತಿಗಳು ೧೦೦ ರಿಂದ ೧೫೦ ರು.ಗೆ ೪ರಂತೆ ಮಾರಾಟವಾಗುತ್ತಿವೆ. ಇನ್ನು ಪೂಜೆಗೆ ಮುಖ್ಯವಾಗಿ ಬೇಕಾಗುವ ೫ ಬಗೆಯ ಹಣ್ಣುಗಳು 120 ರಿಂದ 150 ವರೆಗೆ ಮಾರಾಟವಾಗುತ್ತಿದ್ದರೆ, ಸೇಬು 150-200 ಕೆ.ಜಿ, ಮೊಸಂಬಿ ೧೮೦-೨೦೦ ಕೆ.ಜಿ, ದಾಳಿಂಬೆ ೭೦-೮೦ ಕೆ.ಜಿ, ಸೀತಾಫಲ ೧೦೦-೧೨೦ ಕೆ.ಜಿ, ಚೆಂಡು ಹೂವು ೪೦-೫೦ ಕೆ.ಜಿ., ಶಾವಂತಿಗೆ ೪೦ ಕೆ.ಜಿಯಂತೆ ಮಾರಾಟವಾಗುತ್ತಿವೆ.ಬಗೆ-ಬಗೆಯ ಆಕಾಶ ಬುಟ್ಟಿ: ನಗರದ ಬ್ಯಾಂಕ್ ರಸ್ತೆ, ಟಾಂಗಾಕೂಟ, ಸ್ಟೇಷನ್ ರಸ್ತೆಗಳಲ್ಲಿ ಮಾರಾಟಕ್ಕಿಟ್ಟಿರುವ ಬಣ್ಣ ಬಣ್ಣದ ಆಕಾಶಬುಟ್ಟಿಗಳು ಚೌಕ, ವೃತ್ತ, ಚಂದ್ರ, ನಕ್ಷತ್ರ, ಪಿರಾಮಿಡ್ ಸೇರಿದಂತೆ ವಿವಿಧ ಆಕಾರದ ಆಕಾಶ ಬುಟ್ಟಿಗಳು ಜನರನ್ನ ಆಕರ್ಷಿಸುತ್ತಿದ್ದು, ಸಾಧಾರಣ ಆಕಾಶ ಬುಟ್ಟಿಗಳು ೫೦ರಿಂದ ೩೦೦ರ ವರೆಗೆ ಮಾರಾಟವಾದರೆ, ವಿವಿಧ ವಿನ್ಯಾಸ ಹೊಂದಿದ ದೊಡ್ಡ ಆಕಾಶ ಬುಟ್ಟಿಗಳು ೫೦೦ರಿಂದ ೧೦೦೦ ರು. ಗಾತ್ರ, ವಿನ್ಯಾಸಕ್ಕೆ ತಕ್ಕಂತೆ ಮಾರಾಟವಾಗುತ್ತಿವೆ. ಖರೀದಿ ಮಾಡಿದ ಆಕಾಶ ಬುಟ್ಟಿಗಳನ್ನು ತಮ್ಮ-ತಮ್ಮ ಮನೆ ಎದುರು ಹಾಕಿ, ಬಣ್ಣ-ಬಣ್ಣದ ದೀಪಗಳಿಂದ ಅಲಂಕರಿಸಿ ಮನೆ-ಮನ ಬೆಳಗಿಸಲು ಜನರು ತಯಾರಾಗಿದ್ದಾರೆ.
ಬೆಲೆ ಕಳೆದುಕೊಂಡ ಹೂವು: ವರುಣನ ಮುನಿಸಿನ ಪರಿಣಾಮ ಹೂ ಸರಿಯಾಗಿ ಕೈಗೆ ಬಂದಿಲ್ಲ. ಬೆಳೆಯಲು ಮಾಡಿದ ಖರ್ಚನ್ನು ವಾಪಸ್ ಪಡೆಯಲಾಗುತ್ತಿಲ್ಲ. ಗದಗ ಎಪಿಎಂಸಿ ಹೂವಿನ ಮಾರುಕಟ್ಟಿಯಲ್ಲಿ ಮಾರಾಟಕ್ಕೆ ತಂದಿರುವ ಹೂವನ್ನು ಚರಂಡಿ, ಕಸದ ತೊಟ್ಟಿಗೆ ಹಾಕಿರುವ ದೃಶ್ಯ ಕಂಡು ಬಂದಿತು.