ಬೆಳಕಿನ ಹಬ್ಬ ದೀಪಾವಳಿಗೆ ರಾಯಚೂರಿನಲ್ಲಿ ಭರದ ಸಿದ್ಧತೆ

KannadaprabhaNewsNetwork | Published : Nov 1, 2024 12:12 AM

ಸಾರಾಂಶ

ತೀವ್ರ ಬರದ ಬಳಿಕ ಉತ್ತಮ ಮುಂಗಾರು-ಹಿಂಗಾರಿನಿಂದಾಗಿ ಪ್ರಸಕ್ತ ಸಾಲಿನಲ್ಲಿ ರೈತರು ಸೇರಿ ನಿರೀಕ್ಷಿತ ಫಲ ಕಂಡಿದ್ದರಿಂದ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿಯನ್ನು ಅಷ್ಟೇ ಸಂಭ್ರಮದಿಂದ ಆಚರಿಸಲು ಎಲ್ಲ ವರ್ಗದ ಜನರು ಮುಂದಾಗಿದ್ದರಿಂದ ಎಲ್ಲೆಡೆ ಹಬ್ಬದ ವಾತಾವರಣವು ಮನೆಮಾಡಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೆಳಕಿನ ಹಬ್ಬವಾದ ದೀಪಾವಲಿಗೆ ಭರದ ಸಿದ್ಧತೆ ಸಾಗಿದ್ದು, ಬೆಲೆ ಏರಿಕೆ ಭಾರದಡಿ ಜನಸಾಮಾನ್ಯರು ಪಟಾಕಿ ಸೇರಿ ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ಗುರುವಾರ ತೊಡಗಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.

ತೀವ್ರ ಬರದ ಬಳಿಕ ಉತ್ತಮ ಮುಂಗಾರು-ಹಿಂಗಾರಿನಿಂದಾಗಿ ಪ್ರಸಕ್ತ ಸಾಲಿನಲ್ಲಿ ರೈತರು ಸೇರಿ ನಿರೀಕ್ಷಿತ ಫಲ ಕಂಡಿದ್ದರಿಂದ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿಯನ್ನು ಅಷ್ಟೇ ಸಂಭ್ರಮದಿಂದ ಆಚರಿಸಲು ಎಲ್ಲ ವರ್ಗದ ಜನರು ಮುಂದಾಗಿದ್ದರಿಂದ ಎಲ್ಲೆಡೆ ಹಬ್ಬದ ವಾತಾವರಣವು ಮನೆಮಾಡಿ, ವ್ಯಾಪಾರ-ವಹಿವಾಟು ಜೋರಾಗಿ ಸಾಗಿದೆ. ದಸರಾ ಹಬ್ಬದಂತೆಯೇ ದೀಪಾವಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದ್ದರು ಸಹ ಜನರು ತಮ್ಮ ಜೇಬುಗಳನ್ನು ಭಾರ ಮಾಡಿಕೊಂಡು ಅಗತ್ಯ ವಸ್ತುಗಳ ಖರೀದಿಯ ಮಾಡುತ್ತಿದ್ದ ದೃಶ್ಯ ಗೋಚರಿಸಿತು.

ತುಟ್ಟಿಯಾಗಿರುವ ಕಾಯಿಪಲ್ಲೆಯೊಂದಿಗೆ ಹಬ್ಬದ ಅಗತ್ಯವಾದ ಹೂ, ಹಣ್ಣು, ಕುಂಬಳಕಾಯಿ, ಬಾಳೆ ಗೊನೆ, ನಿಂಬೆ ಹಣ್ಣು, ಸೇರಿ ಇತರೆ ಪೂಜಾ ಸಾಮಗ್ರಿಗಳನ್ನು ಜನಸಾಮಾನ್ಯರು ಕೊಂಡು ಮನೆಗಳಿಗೆ ತೆಗೆದುಕೊಂಡು ಹೋದರು. ದೀಪಾವಳಿ ಹಬ್ಬ ಎಂದರೆ ಲಕ್ಷ್ಮೀ ಪೂಜೆ ವಿಶೇಷವಾಗಿರುತ್ತದೆ. ಎಲ್ಲ ಅಂಗಡಿಗಳಲ್ಲಿ ಹಬ್ಬದಂದು ಲಕ್ಷ್ಮೀ ಪೂಜೆಯನ್ನು ಅದ್ದೂರಿಯಾಗಿ ಆಚರಿಸುವುದರಿಂದ ಪೂಜೆ ಬೇಕಾದ ಎಲ್ಲ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಚೆಂಡು ಹೂಗಳನ್ನು ರಸ್ತೆ ಬದಿಯಲ್ಲೇ ರಾಶಿ ರಾಶಿ ಹಾಕಿ ಕೆಜಿಗಟ್ಟಲೇ ಮಾರಾಟ ಮಾಡುತ್ತಿದ್ದರು. ಇನ್ನೂ ಕೆಲ ರೈತರು ಟ್ರಾಕ್ಟರ್‌ಗಳ ಟ್ರಾಲಿಗಳಲ್ಲಿ ಹೂ ತುಂಬಿಕೊಂಡು ಬಂದು ರಸ್ತೆ ಬದಿಯಲ್ಲಿಯೇ ಮಾರಾಟ ಮಾಡಿದರು. ಹಬ್ಬಕ್ಕೆ ಬೇಕಾದ ಕಾಯಿಪಲ್ಲೆ, ಹಣ್ಣು-ಹಂಪಲ, ಪೂಜಾ ಸಾಮಗ್ರಿಗಳ ಮಾರಾಟ ಭರದಿಂದ ನಡೆಯಿತು.

ಏಕಕಾಲಕ್ಕೆ ಜನ ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಮಾರುಕಟ್ಟೆಯಲ್ಲಿಯೂ ಜನಜಂಗುಳಿ ಏರ್ಪಟ್ಟಿತ್ತು. ಇದರಿಂದ ನಗರದ ಚಂದ್ರಮೌಳೇಶ್ವರ ವೃತ್ತ, ಭಂಗಿಕುಂಟ, ಮಾರುಕಟ್ಟೆ, ಬಟ್ಟೆ ಬಜಾರ್, ಬಂಗಾರ ಬಜಾರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನ ಗಂಟೆಗಟ್ಟಲೇ ಪರದಾಡುವಂತಾಯಿತು.ರಾಯಚೂರಿನ ಭಂಗಿಕುಂಟ, ಬಟ್ಟೆ ಬಜಾರ್, ತರಕಾರಿ ಮಾರುಕಟ್ಟೆಯಲ್ಲಿ ಕಾಲಿಡಲು ಜಾಗವಿರಲಿಲ್ಲ.ಮಾರುಕಟ್ಟೆಯಲ್ಲಿ ವಾಹನದ ಜೊತೆಗೆ ಜನಜಂಗುಳಿ ಹೆಚ್ಚಿದ್ದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರ ಸಾಹಸ ಪಟ್ಟರು.

ನಿಷೇಧದ ನಡುವೆ ಪಟಾಕಿ ವ್ಯಾಪಾರ ಭರಾಟೆ:

ಸ್ಥಳೀಯ ವಾಲ್ಕಟ್ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಪಟಾಕಿ ವ್ಯಾಪಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಒಂದು ಕರೆ ಪಟಾಕಿ ನಿಷೇಧದ ಮಾತನ್ನಾಡುವವರೇ ಮತ್ತೊಂದು ಕಡೆ ಪಟಾಕಿ ಮಳಿಗೆಗಳಿಗೆ ಪರವಾನಗಿ ನೀಡಿರುವುದಕ್ಕೆ ಪರಿಸರ ಪ್ರೇಮಿಗಳ ಅಸಮಾಧಾನ ವ್ಯಕ್ತಪಡಿಸಿದರು. ಬೆಳಕಿನ ಹಬ್ಬದಲ್ಲಿ ಪಟಾಕಿಗಳೇ ಭೂಷಣವಾಗಿದ್ದರಿಂದ ವಿವಿಧ ಬಗೆಯ ಪಟಾಕಿಗಳ ಖರೀದಿಯ ಭರಾಟ ಜೊರಾಗಿತ್ತು.

ಜಿಲ್ಲಾಡಳಿತದಿಂದ ಪಟಾಕಿ ವ್ಯಾಪಾರಕ್ಕೆ ಅನುಮತಿ ಪಡೆಯಲು ವ್ಯಾಪಾರಿಗಳು ಎಣಗಾಡಿ ಕೊನೆಗೆ ಅನುಮತಿ ಸಿಕ್ಕಿದ್ದು, ಸುಮಾರು 40 ಅಧಿಕ ಮಳಿಗೆಗಳನ್ನು ಹಾಕಿ ವ್ಯಾಪಾರ ಕ್ಕೆ ಅನುವು ಮಾಡಿಕೊಡಲಾಗಿದೆ. ಹಸಿರು ಪಟಾಕಿಗಳನ್ನೇ ಹೆಚ್ಚಾಗಿ ಮಾರಾಟ ಮಾಡಬೇಕು ಎಂಬ ನಿಯಮ ಇದ್ದರೂ ಎಲ್ಲ ರೀತಿಯ ಪಟಾಕಿ ಮಾರುತ್ತಿರುವುದು ಕಂಡು ಬಂತು.

ಸಿಂಧನೂರು: ದೀಪಾವಳಿ ಹಬ್ಬಕ್ಕೆ ಭರ್ಜರಿ ಖರೀದಿ

ದೀಪಾವಳಿ ಹಬ್ಬ ಆಚರಣೆ ಅಂಗವಾಗಿ ಗುರುವಾರ ಸಂಜೆ ನಗರದ ಪ್ರಮುಖ ರಸ್ತೆಯಲ್ಲಿ ಹಣ್ಣು, ಹೂ, ಕಬ್ಬಿನ ದಂಟು, ಬಾಳೆದಿಂಡು, ಹೂಗಳು, ಪಟಾಕಿಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರ್ಜರಿಯಾಗಿ ನಡೆಯಿತು.ಒಂದು ಮಾರು ಚಂಡು ಹೂ ರೂ.60 ರಿಂದ 80, ಸೇವಂತಿಗೆ ರೂ.80 ರಿಂದ 100, ಮಲ್ಲಿಗೆ, ಕಾಕಾಡ ಹೂಗಳು ಮೊಳಕ್ಕೆ ರೂ.50, ಸೇಬು ಹಣ್ಣು ಕೆ.ಜಿ ರೂ.150, ದಾಳಿಂಬೆ ರೂ.80, ಬಾಳೆಹಣ್ಣು ರೂ.50ಕ್ಕೆ ಡಂಜನ್, ಗೊನೆಬಾಳೆ ಹಣ್ಣು ರೂ.500 ರಿಂದ 800 ರವರೆಗೆ ಮಾರಾಟವಾದವು.ಜೊತೆಗೆ ಕಾಯಿಪಲ್ಲೆ ಸಹ ದುಬಾರಿಯಾಗಿದ್ದು, ಉಳ್ಳಾಗಡ್ಡಿ ಕೆ.ಜಿ ₹.100, ಟೊಮೆಟೊ ₹ 60, ಹಸಿಮೆಣಸಿನ ಕಾಯಿ ₹50 ಹೀಗೆ ಮಾರಾಟವಾಗುತ್ತಿದ್ದರೂ ಸಹ ಗ್ರಾಹಕರು ಹಬ್ಬದ ನಿಮಿತ್ತ ಬೆಲೆಯ ಬರೆಯನ್ನು ಗಮನಿಸದೆ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು.

ನಗರದ ಕನಕದಾಸ ವೃತ್ತ, ಮಹಾತ್ಮಗಾಂಧಿ ವೃತ್ತ, ಕೋರ್ಟ್ ಬಳಿ, ಕಿತ್ತೂರುರಾಣಿ ಚೆನ್ನಮ್ಮ ವೃತ್ತ, ಬಸ್ ನಿಲ್ದಾಣದ ಬಳಿ, ಬಸವ ವೃತ್ತ, ಪಿಡಬ್ಲ್ಯೂಡಿ ಕ್ಯಾಂಪ್ ಮತ್ತಿತರ ಕಡೆಗಳಲ್ಲಿ ರಾಶಿ-ರಾಶಿ ಹೂಗಳು, ವಿವಿಧ ಬಗೆಯ ದಂಟುಗಳು, ಬಾಳೆ ಗೊನೆ, ಮಾವಿನ ಎಲೆಗಳ ದಂಟುಗಳ ಮಾರಾಟ ನಡೆಯಿತು. ಜನರು ಸಹ ಮುಗಿಬಿದ್ದು ಖರೀದಿ ಮಾಡಿದರು. ಕೆಲವೆಡೆ ರಸ್ತೆಯ ಅಕ್ಕಪಕ್ಕದಲ್ಲಿಯೇ ಮಾರಾಟ ನಡೆಯುತ್ತಿರುವುದರಿಂದ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.ನಿಷೇಧಿತ ಪಟಾಕಿ ಮಾರಾಟ, ನಿಯಂತ್ರಣಕ್ಕೆ ಒತ್ತಾಯ

ದೇವದುರ್ಗ : ಪರಿಸರದಲ್ಲಿ ಹಾನಿಕಾರಕ ವಾತವರಣ ನಿರ್ಮಿಸುವ ಪಟಾಕಿಗಳ ಮಾರಟವನ್ನು ಸರ್ಕಾರ ನಿಷೇಧಿಸಿದ್ದು, ಹಸಿರು ಪಟಾಕಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕೆಂದು ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಒತ್ತಾಯಿಸಿದ್ದಾರೆ.ಪಟ್ಟಣದಲ್ಲಿ ತಹಸೀಲ್ದಾರ್‌ ಚನ್ನಮಲ್ಲಪ್ಪ ಘಂಟಿಯವರಿಗೆ ಮನವಿ ಸಲ್ಲಿಸಿ ತಾಲ್ಲೂಕಿನಲ್ಲಿ ಪರವಾನಿಗಿ ಪಡೆಯದೇ ಪಟಾಕಿಗಳ ಮಾರಾಟ ಭರದಿಂದ ಸಾಗಿದೆ. ಅಹಿತಕಾರಿ ಘಟನೆಗಳು ಜರುಗದಂತೆ ಮುಂಜಾಗೃತ ಕ್ರಮವಾಗಿ ಪೋಲಿಸ್, ಪುರಸಭೆ, ಗ್ರಾಪಂ ಅಧಿಕಾರಿಗಳಿಗೆ ನಿಗಾ ವಹಿಸಲು ಆದೇಶಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸದ್ದಾರೆ.

Share this article