ಡಿಕೆ ಮುಂದೆ ಸಚಿವ ಸ್ಥಾನಕ್ಕೆ ಬೇಡಿಕೆ ಸುರಿಮಳೆ

KannadaprabhaNewsNetwork |  
Published : Jun 01, 2026, 01:45 AM IST
DK Shivakumar

ಸಾರಾಂಶ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಭಾನುವಾರವೂ ಶಾಸಕರ ಭೇಟಿ ಜೋರಾಗಿತ್ತು. ಸಚಿವ ಸ್ಥಾನದ ಆಕಾಂಕ್ಷಿಗಳು, ಬೆಂಬಲಿಗ ಶಾಸಕರು ದಿನವಿಡೀ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಶುಭ ಕೋರಿದರು.

 ಬೆಂಗಳೂರು :  ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಭಾನುವಾರವೂ ಶಾಸಕರ ಭೇಟಿ ಜೋರಾಗಿತ್ತು. ಸಚಿವ ಸ್ಥಾನದ ಆಕಾಂಕ್ಷಿಗಳು, ಬೆಂಬಲಿಗ ಶಾಸಕರು ದಿನವಿಡೀ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಶುಭ ಕೋರಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನಂತರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿನಂದಿಸಲು ಶಾಸಕರು, ಪಕ್ಷದ ನಾಯಕರು ಭಾನುವಾರ ಸದಾಶಿವನಗರದ ನಿವಾಸಕ್ಕೆ ಆಗಮಿಸಿದರು.

ಪ್ರಮುಖವಾಗಿ ಹಿರಿಯ ಶಾಸಕರಾದ ಎಚ್‌.ಕೆ.ಪಾಟೀಲ್‌, ಡಾ.ಎಚ್‌.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್‌, ದಿನೇಶ್‌ ಗುಂಡೂರಾವ್‌, ಮಂಕಾಳ ವೈದ್ಯ, ಬಿ.ಆರ್‌.ಪಾಟೀಲ್‌, ಮಧು ಬಂಗಾರಪ್ಪ, ತನ್ವೀರ್‌ ಸೇಠ್‌, ವಿಜಯಾನಂದ ಕಾಶಪ್ಪನವರ್‌, ರಾಘವೇಂದ್ರ ಹಿಟ್ನಾಳ್‌, ಅಜಯ್‌ ಸಿಂಗ್‌, ರೂಪಕಲಾ ಶಶಿಧರ್‌, ಸಂಸದ ತುಕಾರಾಂ ಸೇರಿ ಹಲವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಕೆಲ ಶಾಸಕರು ಸಚಿವ ಸ್ಥಾನಕ್ಕೂ ಬೇಡಿಕೆಯಿಟ್ಟರು.

ಉಳಿದಂತೆ ಸಿದ್ದರಾಮಯ್ಯ ಪುತ್ರ ವಿಧಾನಪರಿಷತ್‌ ಸದಸ್ಯ ಯತೀಂದ್ರ ಅವರು ಭಾನುವಾರ ಸಂಜೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿದ್ದಕ್ಕೆ ಶುಭ ಕೋರಿದರು.ನಾಡಿದ್ದು ಕಾಂಗ್ರೆಸ್‌ ಭವನಕ್ಕೆ ಭೂಮಿಪೂಜೆ: ಡಿಕೆ

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ನಗರದ ರೇಸ್‌ಕೋರ್ಸ್‌ ರಸ್ತೆ ಬಳಿ ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಅದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಸಮಯ ನಿಗದಿ ಮಾಡಬೇಕಿದೆ ಎಂದೂ ಹೇಳಿದ್ದಾರೆ. 

ಉದ್ದೇಶಿತ ಕಾಂಗ್ರೆಸ್‌ ಭವನ ನಿರ್ಮಾಣದ ಜಾಗಕ್ಕೆ ನೀಡಿ ಪರಿಶೀಲನೆ

ಭಾನುವಾರ ಉದ್ದೇಶಿತ ಕಾಂಗ್ರೆಸ್‌ ಭವನ ನಿರ್ಮಾಣದ ಜಾಗಕ್ಕೆ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನೂ ಜೂ.3ರಂದೇ ನಡೆಸಲು ಚಿಂತನೆ ನಡೆಸಲಾಗಿದೆ. ಅದಕ್ಕೆ ಪಕ್ಷದ ಎಲ್ಲ ಬ್ಲಾಕ್‌ ಮತ್ತು ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಸಂಸದರು ಸೇರಿ ಹಲವು ನಾಯಕರನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ರಾಹುಲ್‌ ಗಾಂಧಿ ಅವರಿಗೆ ಇನ್ನಷ್ಟೇ ನೀಡಬೇಕಿದೆ. ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಸಲಾಗುವುದು ಎಂದು ವಿವರಿಸಿದರು. 

ನಿಗದಿತ ಮಂದಿಗಷ್ಟೇ ಅವಕಾಶ: 

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ನಿಯಮಿತ ನಾಯಕರಿಗಷ್ಟೇ ಅವಕಾಶವಿದೆ. ಹೀಗಾಗಿ ಪಕ್ಷದ ಎಲ್ಲ ನಾಯಕರು ಮತ್ತು ಪದಾಧಿಕಾರಿಗಳಿಗೆ ಆಹ್ವಾನ ನೀಡಲು ಆಗುವುದಿಲ್ಲ. ಅದರಿಂದ ಕಾಂಗ್ರೆಸ್‌ ಭವನ ಶಂಕುಸ್ಥಾಪನೆ ನಡೆಯುವ ಸ್ಥಳದಲ್ಲೇ ಎಲ್‌ಇಡಿ ಪರದೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ನಮಗಾಗಿ ಹೋರಾಟ ಮಾಡಿ, ಶ್ರಮಿಸಿದ ನಾಯಕರಿಗೆ ಇಷ್ಟಾದರೂ ಅವಕಾಶ ಮಾಡಿಕೊಡಬೇಕಿದೆ ಎಂದರು. 

ಜನರಿಗೆ ತೊಂದರೆ ಆಗದಂತೆ ಕ್ರಮ: 

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಕುರಿತಂತೆ ಮಾತನಾಡಿದ ಡಿಕೆಶಿ, ಬೆಂಗಳೂರಿನ ಜನರಿಗೆ ತೊಂದರೆ ಆಗಬಾರದು, ಹೊರಗಡೆಯಿಂದ ಹೆಚ್ಚಿನ ವಾಹನಗಳು ಆಗಮಿಸಿ ಸಂಚಾರ ದಟ್ಟಣೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ವಿಧಾನಸೌಧದ ಮೆಟ್ಟಿಲುಗಳ ಬದಲು ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಸರಳವಾಗಿ ನಡೆಯುತ್ತಿರುವುದರಿಂದ ಹೆಚ್ಚಿನ ಜನ ಸೇರಲು ಆಗುವುದಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ಕ್ಷಮಿಸಬೇಕು ಎಂದು ತಿಳಿಸಿದರು.ಎಷ್ಟು ಜನರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಆ ಬಗ್ಗೆ ತಿಳಿದಿಲ್ಲ. ಪಕ್ಷದ ಹೈಕಮಾಂಡ್‌ ನಾಯಕರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ದಸಂಸ ಆಗ್ರಹ
ರಾಯಚೂರು ವಲಯ ಕ್ರಿಕೆಟ್ ತಂಡಕ್ಕೆ ದಿಶಾ ಶಿರೋಳ ಆಯ್ಕೆ