ಕನ್ನಡಪ್ರಭ ವಾರ್ತೆ ಮದ್ದೂರು
ತಾವು ಕೇಂದ್ರ ಸಚಿವ ಎನ್ನುವುದನ್ನು ಮರೆತು ಕುಮಾರಸ್ವಾಮಿ ಹಾದಿ ಬೀದಿಯಲ್ಲಿ ಜನರು ಮಾತನಾಡುವ ರೀತಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ನಪುಂಸಕ. ಆತ ಮನುಷ್ಯನ ಹಾಗೂ ಅವರ ಯೋಗ್ಯತೆ ಬಗ್ಗೆ ಲಘವಾಗಿ ಮಾತನಾಡಿದ್ದಾರೆ. ಎಚ್ಡಿಕೆ ತಮ್ಮ ಕೇಂದ್ರ ಸಚಿವ ಸ್ಥಾನದ ಘನತೆಯನ್ನು ಕಾಪಾಡುವ ರೀತಿಯಲ್ಲಿ ಮಾತನಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು. ಕುಮಾರಸ್ವಾಮಿಗೆ ಮಾತ್ರ ಇಂತಹ ಕೀಳು ಮಾತುಗಳನ್ನಾಡಲು ಬರುತ್ತದೆ ಎಂದು ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಇರುವ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಸಹ ಕುಮಾರಸ್ವಾಮಿಗಿಂತಲೂ ದುಪ್ಪಟ್ಟು ಮಾತನಾಡಲು ಬರುತ್ತದೆ. ಇದಕ್ಕೆ ಕುಮಾರಸ್ವಾಮಿ ಅವಕಾಶ ಕೊಡದೆ ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಬುದ್ಧಿಮಾತು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಾವು ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ಅವರ ವಿರುದ್ಧ 50 ಡಿನೋಟಿಫಿಕೇಶನ್ ಪ್ರಕರಣ ಇರುವುದನ್ನು ಡಿಕೆಶಿ ಬಹಿರಂಗಪಡಿಸಿದ್ದಾರೆ. ಇದರಿಂದ ಭಯಭೀತರಾಗಿ ಸಚಿವ ಕುಮಾರಸ್ವಾಮಿ ಈ ರೀತಿ ಲಘು ಮಾತುಗಳನ್ನು ಪ್ರಯೋಗಿಸುತ್ತಿದ್ದಾರೆ. ಈ ಪ್ರಕರಣಗಳ ಬಗ್ಗೆ ಆದಷ್ಟು ಶೀಘ್ರವಾಗಿ ತನಿಖೆ ನಡೆದು ಎಚ್ಡಿಕೆ ಎಷ್ಟು ಸತ್ಯ ಹರಿಶ್ಚಂದ್ರರು ಎನ್ನುವುದು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎನ್ನುವುದನ್ನು ಅವರು ಮರೆತಿದ್ದಾರೆ. ಅವರ ಮೇಲೆ ಇನ್ನೂ ಅನೇಕ ಭ್ರಷ್ಟಾಚಾರದ ಪ್ರಕರಣಗಳಿವೆ. ಅದರ ಜೊತೆಗೆ ಪೋಕ್ಸೋ ಪ್ರಕರಣವೂ ದಾಖಲಾಗಿದೆ. ಇಂತಹ ಕಳಂಕ ರಹಿತ ನಾಯಕರು ನಮ್ಮ ಜನಪರ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಲೇವಡಿ ಮಾಡಿದರು.
ಶಾಸಕರಿಂದ ಬಸ್ ತಂಗುದಾಣ ಉದ್ಘಾಟನೆ:
ಗ್ರಾಮದಲ್ಲಿ 7 ಲಕ್ಷ ರು. ವೆಚ್ಚದಲ್ಲಿ ಕೆಆರ್ ಐಡಿಎಲ್ ನಿರ್ಮಿಸಿರುವ ಬಸ್ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಚುನಾವಣೆ ನಂತರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬಸ್ ತಂಗುದಾಣ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರು ಎಂದರು. ತದನಂತರ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಕಾರಣ ತಂಗುದಾಣದ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಭಾಗ್ಯ ಕಂಡಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.