ಡಿ.ಕೆ.ಸುರೇಶ್ ಸೋಲು ನೋವು ತರಿಸಿದೆ: ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Jun 06, 2024, 12:31 AM IST
ಫೋಟೊ. 05ಮಾಗಡಿ01: ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿದರು.                         | Kannada Prabha

ಸಾರಾಂಶ

DK Suresh, defeat , pain, MLA Balakrishna,JDS, BJP, cpongress, dkshivakumar, cmsiddaramaiha, kpnews, kannadaprabha, cnmanjunath

ಕನ್ನಡಪ್ರಭ ವಾರ್ತೆ ಮಾಗಡಿ

ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಸೋಲು ನನಗೆ ನೋವು ತಂದಿದ್ದು, ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಒಬ್ಬ ಶಾಸಕರ ರೀತಿಯಲ್ಲಿ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾರ್ಯಚಟುವಟಿಕೆ ನಡೆಸಿ, ಜನ ಸಾಮಾನ್ಯರಿಗೆ ಬಹಳ ಸುಲಭವಾಗಿ ಸಿಗುವ ಸಂಸದರಾಗಿದ್ದರು. ಅವರ ಸೋಲಿನಿಂದ ನಮ್ಮ ಮನಸ್ಸಿಗೆ ಬೇಸರವಾಗಿದ್ದರೂ ಸಹ ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಡಿ.ಕೆ.ಸುರೇಶ್ ಕಾಂಗ್ರೆಸ್ ಪಕ್ಷದಲ್ಲಿರುವ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಲಿಷ್ಠಗೊಳಿಸುವ ವ್ಯಕ್ತಿತ್ವ ಹೊಂದಿದ್ದರು, ಅವರು ನಮ್ಮನ್ನು ಗೆಲ್ಲಿಸಿದ್ದರು, ಆದರೆ ಅವರನ್ನು ಗೆಲ್ಲಿಸಲು ನಮಗೆ ಸಾಧ್ಯವಾಗಲಿಲ್ಲ ಎನ್ನುವ ನೋವು ನಮ್ಮನ್ನು ಕಾಡುತ್ತಿದೆ. ಡಾ.ಸಿ.ಎನ್.ಮಂಜುನಾಥ್ ಅವರದ್ದು ಹೊಸ ಮುಖ, ಮಾಧ್ಯಮಗಳು ಸಹ ಮಂಜುನಾಥ್ ಅವರನ್ನು ಹೈಲೈಟ್ ಮಾಡುವ ಮೂಲಕ ಹೆಚ್ಚು ಒತ್ತು ನೀಡಿದ್ದವು. ಅವರು ಅಭ್ಯರ್ಥಿಯಾದ ತಕ್ಷಣ ಹೃದಯವಂತ, ಜಯದೇವ ಆಸ್ಪತ್ರೆಯಲ್ಲಿ 85 ಸಾವಿರ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ ಎಂಬಿತ್ಯಾದಿ ಜನಸಾಮಾನ್ಯರಲ್ಲಿ ಪ್ರಚಾರವಾಗಿ ಡಾ. ಮಂಜುನಾಥ್ ಗೆಲ್ಲಲು ಸಹಕಾರಿಯಾಯಿತು. ನೂತನ ಸಂಸದರ ಸೇವೆ ನಮ್ಮ ಕ್ಷೇತ್ರಕ್ಕೂ ಸಿಗಲಿ ಎಂದು ಅಪೇಕ್ಷೆ ಪಡುತ್ತೇನೆ ಎಂದು ಹೇಳಿದರು.

ಡಿ.ಕೆ.ಸುರೇಶ್ ಅವರ ಸೋಲಿನಿಂದ ಹೇಮಾವತಿ ನೀರಾವರಿ ಯೋಜನೆಯ ಮೇಲೆ ಯಾವುದಾದರೂ ಪ್ರಭಾವ ಬೀರುತ್ತದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಶಾಸಕರು ಪ್ರತಿಕ್ರಿಯಿಸಿ, ಶಕ್ತಿಯುತ ಸಿ.ಎನ್.ಮಂಜುನಾಥ್ ಅವರು ಸಂಸದರಾಗಿ ಆಯ್ಕೆಯಾಗಿದ್ದು, ಯಾವುದೇ ಪ್ರಭಾವ ಬೀರುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸ್ಪರ್ಧಿಸುವಾಗ ನನ್ನನ್ನು ಗೆಲ್ಲಿಸಿದರೆ ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆ, ಇಡೀ ರಾಜ್ಯದ ನೀರಾವರಿ ಸಮಸ್ಯೆಗಳಾದ ಮೇಕೆದಾಟು, ಉತ್ತರ ಕರ್ನಾಟಕದ ಮಹಾದಾಯಿ ಸೇರಿ ಎಲ್ಲವನ್ನೂ ಕೂಡ 2 ವರ್ಷಗಳಲ್ಲಿ ಮೋದಿಯವರ ಮನವೂಲಿಸಿ ಬಗೆಹರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಅವರು ಈಗ ಗೆದ್ದಿದ್ದು ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಯುವುದಿಲ್ಲ ಎಂದು ಭಾವಿಸಿದ್ದು, ಮೇಕೆದಾಟು ಯೋಜನೆಗೂ ಸಹ ವರ್ಷದಲ್ಲಿ ಕೇಂದ್ರ ಸರಕಾರದ ಮನವೂಲಿಸಿ ಮೋದಿಯವರನ್ನು ಕರೆಯಿಸಿ ಗುದ್ದಲಿ ಪೂಜೆ ನಡೆಸುತ್ತಾರೆ ಎನ್ನುವ ಆತ್ಮವಿಶ್ವಾಸವಿದೆ ಎಂದು ಹೇಳಿದರು.

ಮಾಜಿ ಶಾಸಕರಿಗೆ ಉತ್ತರ ನೀಡುತ್ತೇನೆ:

ಲೋಕಸಭೆ ಚುನಾವಣೆಗೂ ಮುನ್ನ ಬೋಗಸ್ ಕಾಮಗಾರಿ ಪೂಜೆ ಮಾಡಿದ್ದರು ಎಂಬ ಮಾಜಿ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಯಾವುದೇ ಕಾಮಗಾರಿ ಪೂಜೆ ಕೈಗೆತ್ತಿಕೊಂಡಿರಲಿಲ್ಲ, ಮುಂದಿನ ದಿನಗಳಲ್ಲಿ ಕಾಮಗಾರಿಗಳ ಪೂಜೆ ಮಾಡಿ ಮಾಜಿ ಶಾಸಕರನ್ನು ಸಹ ಕರೆದು ಅವರಿಗೆ ಉತ್ತರ ನೀಡುತ್ತೇನೆ. ಲೋಕಸಭಾ ಚುನಾವಣೆಯ ತೀರ್ಪು ರಾಜ್ಯ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, 2019 ರ ಚುನಾವಣೆಯಲ್ಲಿ ನಾವು ಕೇವಲ 1 ಸ್ಥಾನ ಗಳಿಸಿದ್ದು, ಈ ಬಾರಿ 9 ಸ್ಥಾನ ಗಳಿಸಿದ್ದೇವೆ ಎಂದು ಶಾಸಕರು ತಿಳಿಸಿದರು.

ಮಾಧ್ಯಮಗಳಿಂದ ಮೋದಿ ಜೀವಂತ:

ನರೇಂದ್ರ ಮೋದಿ ಅವರ ಅವನತಿ ಪ್ರಾರಂಭವಾಗಿದೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹಳಷ್ಟು ಚೇತರಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವ ನಂಬಿಕೆ ಇದೆ. ಮಾಧ್ಯಮಗಳಲ್ಲಿ ಕಳೆದ ಒಂದು ವರ್ಷದಲ್ಲಿ ಮೋದಿ ಅವರ ಮುಖವನ್ನು ತೋರಿಸದಿದ್ದರೆ ಈ ಬಾರಿಯೇ ಮೋದಿಯವರು ಮನೆಗೆ ಹೋಗುತ್ತಿದ್ದರು. ಪ್ರತಿನಿತ್ಯ ಮೋದಿಯವರನ್ನು ಮಾಧ್ಯಮಗಳಲ್ಲಿ ತೋರಿಸಿ, ಒಬ್ಬ ಚಿಕ್ಕ ಬಾಲಕನೂ ಮೋದಿಯವರು ಗುರುತಿಸುವಂತೆ ಮಾಡಿದ್ದರಿಂದ ಈ ಮಟ್ಟಕ್ಕೆ ಫಲಿತಾಂಶ ಬಂದಿದೆ. ಎರಡು ವರ್ಷ ಮೋದಿಯನ್ನು ಮಾಧ್ಯಮದವರು ತೋರಿಸದಿದ್ದರೆ ಜನ ಮೋದಿಯನ್ನು ಮರೆತು ಬಿಡುತ್ತಾರೆ, ಮಾಧ್ಯಮದಿಂದ ಮೋದಿ ಜೀವಂತವಾಗಿದ್ದಾರೆಯೇ ಹೊರತು ಅವರ ಸೇವೆಯಿಂದ, ಕೆಲಸದಿಂದ ಅಲ್ಲ ಎಂಬುದು ನನ್ನ ವೈಯುಕ್ತಿ ಅಭಿಪ್ರಾಯ ಎಂದು ತಿಳಿಸಿದರು.

ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಪುರಸಭೆ ಹಿರಿಯ ಸದಸ್ಯ ರಂಗಹನುಮಯ್ಯ, ಶಬ್ಬೀರ್, ಮಾಜಿ ಸದಸ್ಯರಾದ ಬಿ.ಎನ್.ಚಂದ್ರಶೇಖರ್, ಪ್ರವೀನ್, ತಾಪಂ ಮಾಜಿ ಸದಸ್ಯೆ ಸುಮಾ ರಮೇಶ್, ವೀರಶೈವ ಯುವ ಮುಖಂಡ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌
ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!