ಕನ್ನಡಪ್ರಭ ವಾರ್ತೆ ರಾಮನಗರ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ನಡೆಸಿದ ಅದ್ಧೂರಿ ಮೆರವಣಿಗೆ ಅವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸುರೇಶ್ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಬಾಲಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತಿತರ ನಾಯಕರು, ಸುಮಾರು 20 ರಿಂದ 25 ಸಾವಿರ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪುಷ್ಪಾರ್ಚನೆ ಮೂಲಕ ಅವರಿಗೆ ಸ್ವಾಗತ ಕೋರಲಾಯಿತು. ಸಾಂಸ್ಕೃತಿಕ ತಂಡಗಳು ಮೆರವಣಿಗೆಗೆ ಕಳೆ ತಂದವು.ನಾಮಪತ್ರ ಸಲ್ಲಿಕೆಗೂ ಮುನ್ನ ಡಿಕೆಸು ಟೆಂಪಲ್ ರನ್ :
ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಬೆಂಗಳೂರಿನ ಸದಾಶಿವನಗರದಲ್ಲಿ ಸಹೋದರ ಡಿ.ಕೆ.ಶಿವಕುಮಾರ್ ಹಾಗೂ ಅತ್ತಿಕೆ ಉಷಾ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಕೊಂಡರು. ಬಳಿಕ, ತಮ್ಮ ಮನೆದೇವರು ಕನಕಪುರದ ಕೆಂಕೇರಮ್ಮನಿಗೆ ಮೊದಲ ಪೂಜೆ ಸಲ್ಲಿಸಿದರು. ಬಳಿಕ, ತಾಯಿ ಗೌರಮ್ಮನವರ ಆಶೀರ್ವಾದ ಪಡೆದರು. ನಂತರ, ಸಾತನೂರು ಬಳಿಯ ಕಬ್ಬಾಳಮ್ಮ, ರಾಮನಗರದ ಅರ್ಕಾವತಿ ನದಿ ದಂಡೆಯಲ್ಲಿರುವ ಪೀರನ್ ಷಾ ವಲಿ ದರ್ಗಾ ಮತ್ತು ನಗರದ ಶಕ್ತಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.ಬೆಂ.ಗ್ರಾ. ‘ಕೈ’ ಅಭ್ಯರ್ಥಿ ಡಿಕೆಸು ಆಸ್ತಿ 593 ಕೋಟಿ!
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ಡಿ.ಕೆ.ಸುರೇಶ್ ಅವರ ಆಸ್ತಿ ಮೌಲ್ಯ ಕಳೆದ 5 ವರ್ಷಗಳಲ್ಲಿ ಸುಮಾರು ಶೇ 47ರಷ್ಟು (254 ಕೋಟಿ) ವೃದ್ದಿಸಿದೆ. ಅವರೀಗ ಬರೊಬ್ಬರಿ 593.05 ಕೋಟಿ ರು.ಗಳ ಒಡೆಯರಾಗಿದ್ದಾರೆ.ಅವರ ಸ್ಥಿರಾಸ್ತಿಯ ಮೌಲ್ಯ 486.33 ಕೋಟಿ, ಚರಾಸ್ಥಿಯ ಮೌಲ್ಯ 106.71 ಕೋಟಿ. ಸ್ವಯಾರ್ಜಿತ ಆಸ್ತಿಯ ಮೌಲ್ಯ 276.37 ಕೋಟಿ, ಪಿತ್ರಾರ್ಜಿತ ಆಸ್ತಿಯ ಮೌಲ್ಯ 209.96 ಕೋಟಿ. ವಿವಿಧ ಷೇರುಗಳಲ್ಲಿ 2.14 ಕೋಟಿ ರು. ಹೂಡಿಕೆ ಮಾಡಿದ್ದಾರೆ. ಇವರ ಬಳಿ 1 ಕೆಜಿ 260 ಗ್ರಾಂ ಚಿನ್ನ , 4 ಕೆಜಿ 860 ಗ್ರಾಂ ಬೆಳ್ಳಿ ಇದೆ.32.75 ಕೋಟಿ ಮೌಲ್ಯದ ಕೃಷಿ ಭೂಮಿ ಇದೆ. 210 ಕೋಟಿ ಮೌಲ್ಯದ ಕೃಷಿಯೇತರ ಭೂಮಿಯಿದೆ. 212 ಕೋಟಿ ಮೌಲ್ಯದ ವಾಣಿಜ್ಯ ಭೂಮಿ, ಕಟ್ಟಡಗಳಿವೆ. ಬೆಂಗಳೂರು ಗೋಪಾಲಪುರ, ಪಂತರಪಾಳ್ಯದಲ್ಲಿ ಗ್ಲೋಬಲ್ ಮಾಲ್ ಇರುವ ಭೂಮಿಗಳಿವೆ. ಟಿಎನ್ಆರ್-ಇನಿಜಿಯೊ, ತಿರುಪಲಾಯ, ಜಿಗಣಿ ಹೋಬಳಿ, ಆನೇಕಲ್‌ನಲ್ಲಿ ಭೂಮಿ ಹೊಂದಿದ್ದಾರೆ. ರಾಂಪುರ ದೊಡ್ಡಿ, ಕೋಡಿಹಳ್ಳಿ ಹೋಬಳಿ, ಕನಕಪುರದಲ್ಲಿ 30 ಲಕ್ಷ ರೂ. ಮೌಲ್ಯದ ಮನೆ, ಬೆಂಗಳೂರು ಸದಾಶಿವನಗರದ ಅಪ್ಪರ್ ಪ್ಯಾಲೆಸ್ ಆರ್ಚಡ್‌ನಲ್ಲಿ 25.82 ಕೋಟಿ, ಪಂತರಪಾಳ್ಯದ ಸಾಲಾರ್ಪುರಿಯ ಸತ್ವದಲ್ಲಿ 1.01 ಕೋಟಿ ಮೌಲ್ಯದ ಫ್ಲಾಟ್ ಹೊಂದಿದ್ದಾರೆ.2022ರಲ್ಲಿ ಮೇಕೆದಾಟು ಪಾದಯಾತ್ರೆ ಸಂಬಂಧ ಕನಕಪುರದಲ್ಲಿ, 2023ರಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ಸೇರಿ ಅವರ ವಿರುದ್ಧ ಮೂರು ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.
ಕೋಟಿ ಸಾಲಗಾರ, ಅಣ್ಣ-ಅಣ್ಣನ ಮಕ್ಕಳಿಗೆ ಸಾಲ: ಸುರೇಶ್ ಅವರಿಗೆ 150 ಕೋಟಿ ಸಾಲವಿದೆ. ಜೊತೆಗೆ, ಸಹೋದರ ಡಿ.ಕೆ.ಶಿವಕುಮಾರ್‌ಗೆ 30.08 ಕೋಟಿ, ಅಮ್ಮ ಗೌರಮ್ಮ ಗೆ 47.5 ಲಕ್ಷ, ಸಹೋದರನ ಪುತ್ರಿ ಐಶ್ವರ್ಯಗೆ 7.94 ಕೋಟಿ ಸೇರಿ ಒಟ್ಟು 86.37 ಕೋಟಿ ಸಾಲ ನೀಡಿದ್ದಾರೆ.