ಎಳ್ಳು ಅಮಾವಾಸ್ಯೆ ಪೂಜೆಯಲ್ಲಿ ಭಾಗಿ । ರಾಜಕೀಯ ವಲಯದಲ್ಲಿ ತೀವ್ರ ಸಂಚಲನ
ಕನ್ನಡಪ್ರಭ ವಾರ್ತೆ ಅಂಕೋಲಾ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆಯ ಶ್ರೀ ಜಗದೇಶ್ವರಿ ದೇವಸ್ಥಾನಕ್ಕೆ ಡಿ. 19ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗಮಿಸಿದ್ದು, ಸಂಕಷ್ಟ ಹರಣ ಹಾಗೂ ಇಷ್ಟಾರ್ಥಸಿದ್ಧಿ ಕಾಳರಾತ್ರಿ ಎಳ್ಳು ಅಮಾವಾಸ್ಯೆ ಮಾಲೆ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.ಈ ದೇವಸ್ಥಾನದಲ್ಲಿ ಆರು ವರ್ಷಗಳಿಂದ ಪ್ರತಿ ಅಮಾವಾಸ್ಯೆಯಂದು ಡಿ.ಕೆ.ಶಿವಕುಮಾರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತಿದೆ. ಡಿ.ಕೆ. ಶಿವಕುಮಾರ ಅವರು ಪ್ರತಿಯೊಂದು ರಾಜಕೀಯ ನಡೆಗೂ ದೇವಿಯ ಆಶೀರ್ವಾದ ಬೇಡುತ್ತಾರೆ. ಸನ್ನಿಧಾನದ ಅರ್ಚಕ ಗಣೇಶ ನಾಯ್ಕ ಮೂಲಕ ದೂರವಾಣಿಯಲ್ಲಿಯೇ ಸಮಸ್ಯೆ ತಿಳಿಸಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. 2019ರಲ್ಲಿ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾಮೀನು ಪಡೆದಾಗ ಡಿ.ಕೆ. ಶಿವಕುಮಾರ ಅಂಕೋಲಾ ಆಂದ್ಲೆಯ ಶ್ರೀ ಜಗದೇಶ್ವರಿ ದೇವಸ್ಥಾನಕ್ಕೆ ಆಗಮಿಸಿ, ಸಂಕಷ್ಟಹರಣ ಮಾಲೆ ಪೂಜೆ ಸಲ್ಲಿಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ ಅವರ ಆಪ್ತರಾದ ಮೂವರು ಮಾತ್ರ ದೇವಸ್ಥಾನದೊಳಗೆ ಹೋಗಿ ವಿಶೇಷ ಪೂಜೆ ಹಾಗೂ ಹಿಂಗಾರ ದರ್ಶನ ಪಡೆದಿದ್ದರು.
ಸಂಕಷ್ಟಹರಣ ಮಾಲೆ ಪೂಜೆ:
ವೈಯಕ್ತಿಕ ನಂಬಿಕೆ ಮತ್ತು ವಿಶ್ವಾಸ ವಿಚಾರದೊಂದಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ. ದುರ್ಗಾದೇವಿಯ ಆರಾಧನೆ ಮಾಡಿದರೆ ದುಃಖ ದೂರವಾಗುತ್ತದೆ ಎಂಬ ನಂಬಿಕೆಯಿದೆ. ನನ್ನ ತಾಯಿ ಮತ್ತು ಪತ್ನಿ ಅವರು ಈ ಹಿಂದೆ ಜಗದೇಶ್ವರಿ ದೇವಸ್ಥಾನಕ್ಕೆ ಬಂದಿದ್ದರು. ನಾನೀಗ ಬಂದು ತಾಯಿಯ ದರ್ಶನ ಮಾಡಿದ್ದೇವೆ. ಕೇವಲ ನನ್ನ ಕಷ್ಟ ಮಾತ್ರವಲ್ಲ, ಎಲ್ಲರ ಕಷ್ಟವನ್ನು ತಾಯಿ ದೂರ ಮಾಡುವಂತಾಗಲಿ ಎಂದು 2019ರಲ್ಲಿ ಡಿ.ಕೆ. ಶಿವಕುಮಾರ ಮಾಧ್ಯಮದವರ ಮುಂದೆ ಹೇಳಿದ್ದರು.
ಮುಖ್ಯಮಂತ್ರಿಯಾಗುವ ಕನಸನ್ನು ನನಸು ಮಾಡಲು ಶ್ರೀ ಜಗದೇಶ್ವರಿಯ ವಿಶೇಷ ದಿನವಾದ ಎಳ್ಳು ಅಮಾವಾಸ್ಯೆಯಾದ ಶುಕ್ರವಾರ ವಿಶೇಷ ಕಾಳರಾತ್ರಿ ಅಮಾವಾಸ್ಯೆ ಮಾಲೆ ಪೂಜೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.