ನಂಜುಂಡಿ ಕಾಂಗ್ರೆಸ್‌ಗೆ ಸೆಳೆಯಲು ಡಿಕೆಶಿ ಯತ್ನ?

KannadaprabhaNewsNetwork | Updated : Apr 08 2024, 07:36 AM IST

ಸಾರಾಂಶ

ದಿನದಿಂದ ದಿನಕ್ಕೆ ಲೋಕಸಭೆ ಚುನಾವಣೆ ಕಾವು ಪಡೆಯುತ್ತಿರುವ ನಡುವೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಅವರು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

 ಬೆಂಗಳೂರು : ದಿನದಿಂದ ದಿನಕ್ಕೆ ಲೋಕಸಭೆ ಚುನಾವಣೆ ಕಾವು ಪಡೆಯುತ್ತಿರುವ ನಡುವೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಅವರು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಶಿವಕುಮಾರ್ ಅವರು ಭಾನುವಾರ ಬೆಳಗ್ಗೆ ನಂಜುಂಡಿ ಅವರ ನಿವಾಸಕ್ಕೆ ತೆರಳಿ ಉಪಾಹಾರ ಸೇವಿಸಿ ಕೆಲಹೊತ್ತು ಸೌಹಾರ್ದಯುತವಾಗಿ ಚರ್ಚೆ ನಡೆಸಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ವಿಪಕ್ಷಗಳ ಮುಖಂಡರು, ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವುದು ಸೇರಿದಂತೆ ಅನೇಕ ತಂತ್ರಗಾರಿಕೆಗಳನ್ನು ಶಿವಕುಮಾರ್ ಮಾಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮುದಾಯದ ಪ್ರಭಾವಿ ನಾಯಕರಾದ ನಂಜುಂಡಿ ಅವರನ್ನು ಭೇಟಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಜಾತಿ ಗಣತಿ ವರದಿಯನ್ನು ಸ್ವೀಕರಿಸಬೇಕು ಎಂದು ನಂಜುಂಡಿಯವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜ್ಯ ಸರ್ಕಾರ ವರದಿ ಸ್ವೀಕರಿಸಿದಾಗ ಅದನ್ನು ಸ್ವಾಗತಿಸಿದ್ದರು. ಮತ್ತೊಂದೆಡೆ ನಂಜುಂಡಿ ಅವರ ವಿಧಾನ ಪರಿಷತ್ ಅವಧಿ ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಅವರ ಜೊತೆಗಿನ ಭೇಟಿಯು ಹಲವು ಊಹಾಪೋಹಗಳಿಗೆ ಎಡೆಮಾಡಿದೆ.

ಕಾಂಗ್ರೆಸ್ ಪಕ್ಷದಲ್ಲಿದ್ದ ನಂಜುಂಡಿಯವರು ವಿಧಾನಸಭೆ ಚುನಾವಣೆಗೆ ಸ್ಪರ್ಧೆಗೆ ಅವಕಾಶ ನೀಡಿಲ್ಲ, ವಿಧಾನ ಪರಿಷತ್ ಸ್ಥಾನ ನೀಡಲಿಲ್ಲವೆಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಯಡಿಯೂರಪ್ಪ ಅವರ ಬೆಂಬಲದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಆದರೆ, ಇತ್ತೀಚಿನ ಹಲವು ತಿಂಗಳುಗಳಿಂದ ನಂಜುಂಡಿ ಅವರು ಬಿಜೆಪಿಯಿಂದ ಅಂತರ ಕಾಪಾಡಿಕೊಂಡಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದ ವೇಳೆ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ನಿರೀಕ್ಷಿತ ಮಟ್ಟದ ಸಹಾಯ ಮಾಡಲಿಲ್ಲ ಮತ್ತು ತಮ್ಮ ನಾಯಕತ್ವವನ್ನು ಸರಿಯಾಗಿ ಗುರುತಿಸಲಿಲ್ಲ ಎಂಬ ಬೇಸರವೂ ಅವರಲ್ಲಿದೆ.

Share this article