ಡಿಕೆಶಿ ಎರಡೂವರೆ ವರ್ಷಗಳ ಅವಧಿಗೆ ಸಿಎಂ

KannadaprabhaNewsNetwork | Published : Jul 2, 2025 12:23 AM
1ಕೆಆರ್ ಎಂಎನ್ 1.ಜೆಪಿಜಿರಾಮನಗರದ ಮಂಜುನಾಥ ನಗರ - ಚಾಮುಂಡಿಪುರ ರಸ್ತೆ ಬಿಳಗುಂಬ ಸರ್ಕಲ್ ನಲ್ಲಿ 6.9 ಕೋಟಿ ರು.ಗಳ ಬಿಳಗುಂಬ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು. | Kannada Prabha

ರಾಮನಗರ: ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಳಿದ ಎರಡೂವರೆ ವರ್ಷಗಳ ಅವಧಿಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಮನಗರ: ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಳಿದ ಎರಡೂವರೆ ವರ್ಷಗಳ ಅವಧಿಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದ ಮಂಜುನಾಥ ನಗರ - ಚಾಮುಂಡಿಪುರ ರಸ್ತೆ ಬಿಳಗುಂಬ ಸರ್ಕಲ್ ನಲ್ಲಿ 6.9 ಕೋಟಿ ರು. ವೆಚ್ಚದಲ್ಲಿ ಬಿಳಗುಂಬ - ಅರೇಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದರು.

ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿಯಾಗಲು ಶಾಸಕರು ಬೆಂಬಲ ಕೊಡುತ್ತಾರೆ. ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕು ಅಷ್ಟೆ. ಕ್ಷೇತ್ರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಹಾಗೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಒತ್ತಾಸೆಯಿಂದ ಸಾಕಷ್ಟು ಶಾಸಕರು ಬದಲಾವಣೆಯ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಅವರ ಪರವಾಗಿ ಸಾಕಷ್ಟು ಶಾಸಕರು ಧ್ವನಿಗೂಡಿಸ್ತಾರೆ ಎಂದರು.

ಅಧಿಕಾರಕ್ಕೆ ತರುವಲ್ಲಿ ಡಿಕೆಶಿ ಪ್ರಮುಖ ಪಾತ್ರ :

ರಾಜ್ಯದಲ್ಲಿ ಸಾಕಷ್ಟು ರೀತಿಯಲ್ಲಿ ಹೋರಾಟ ಮಾಡಿ ಡಿ.ಕೆ.ಶಿವಕುಮಾರ್ ರವರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಕಷ್ಟಕಾಲದಲ್ಲಿದ್ದ ಪಕ್ಷಕ್ಕೆ ಶಕ್ತಿ ತುಂಬಿ ಎತ್ತರಕ್ಕೆ ತೆಗೆದುಕೊಂಡು ಹೋದವರು. ಅವರು ಕೆಪಿಸಿಸಿ ಅಧ್ಯಕ್ಷರಾದಾಗ 75 ಶಾಸಕರಿದ್ದರು. ಈಗ ಅದರ ಸಂಖ್ಯೆ 136 ತಲುಪಿದೆ. ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೊ, ಆರೋಗ್ಯ ಹಸ್ತ, ಸಹಾಯ ಹಸ್ತದಂತಹ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕ್ಷೇತ್ರದ ಅಭಿವೃದ್ಧಿ ಮತ್ತು ಅನುದಾನ, ಮನಸ್ತಾಪ ಇದೆಯೇ ಎಂದು ಕೇಳುತ್ತಾರೆ. ಅದರ ಬಗ್ಗೆಯೂ ಮಾತನಾಡುತ್ತೇನೆ. ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂಬ ನಮ್ಮ ಅಭಿಲಾಷೆಯನ್ನೂ ವ್ಯಕ್ತಪಡಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದು ಕ್ರಾಂತಿ ಅಲ್ಲ, ಬದಲಾವಣೆ ಸಮಯ:

ಇದೇನು ಬಸ್ಸಾ? ಈ ಟ್ರಿಪ್ ಬೇಡ, ನೆಕ್ಸ್ಟ್ ಟ್ರಿಪ್ ಮಾಡಿ ಅಂತ ಹೇಳೋಕಾಗುತ್ತಾ? ಈ ಟರ್ಮ್ ಅಲ್ಲದೇ ಇನ್ಯಾವ ಟರ್ಮ್ ಮಾಡಿ ಅನ್ನೋದಕ್ಕೆ ಆಗುತ್ತಾ? ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಕಾಲ ಹತ್ತಿರ ಬಂದಿದೆ. ಕ್ರಾಂತಿ ಅಂತ ಹೇಳಿರುವವರೇ ಡೇಟ್ ಕೊಟ್ಟಿದ್ದಾರೆ. ಇದು ಕ್ರಾಂತಿ ಅಲ್ಲ, ಬದಲಾವಣೆ ಸಮಯ. ಸಂಘಟನೆಕಾರ ಮತ್ತು ಹೋರಾಟಗಾರನಿಗೆ ಅವಕಾಶ ಕೇಳುತ್ತಿದ್ದೇವೆ. ಒಬ್ಬರಿಗೊಬ್ಬರು ಅನ್ಯೋನ್ಯವಾಗಿ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಈಗಾಗಲೇ 40 ಮಂದಿ ಶಾಸಕರ ಜೊತೆ ಸುರ್ಜೇವಾಲ ಚರ್ಚೆ ಮಾಡಿದ್ದಾರೆ. ಶಾಸಕರ ಅಹವಾಲು, ಸಮಸ್ಯೆ, ಅಭಿಪ್ರಾಯಗಳನ್ನ ಚರ್ಚೆ ಮಾಡಲಿದ್ದಾರೆ. ನಾನು ಹೋಗಿ ಕ್ಷೇತ್ರದ ಬಗ್ಗೆ ಒಂದಿಷ್ಟು ಚರ್ಚೆ ಮಾಡಿ, ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆಯೂ ಮಾತನಾಡುತ್ತೇನೆ. ಮುಂದೆ ಪಕ್ಷ ಸಂಘಟನೆ ಆಗಬೇಕು ಅಂದರೆ ಕೆಲ ಸಚಿವರ ಮಾತಿಗೆ ಕಡಿವಾಣ ಬೀಳಬೇಕು. ಹಾಗಾಗಿ ಹೈಕಮಾಂಡ್‌ಗೆ ಈ ಬಗ್ಗೆ ಕ್ರಮವಹಿಸುವಂತೆ ಮನವಿ ಮಾಡುತ್ತೇನೆ. ನನ್ನನ್ನೂ ಸೇರಿದಂತೆ ಎಲ್ಲರನ್ನೂ ಹತೋಟಿಗೆ ತರುವಂತೆ ಹೇಳುತ್ತೇನೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ತಾಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇ ಗೌಡ, ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಮುತ್ತುರಾಜು, ಬಿ.ಸಿ.ಪಾರ್ವ ತಮ್ಮ, ಅಜ್ಮದ್, ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್, ಮಾಜಿ ಅಧ್ಯಕ್ಷ ಪಾಪಣ್ಣ, ಮುಖಂಡರಾದ ರಘು ಮತ್ತಿತರರು ಹಾಜರಿದ್ದರು.

1ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಮಂಜುನಾಥ ನಗರ - ಚಾಮುಂಡಿಪುರ ರಸ್ತೆ ಬಿಳಗುಂಬ ಸರ್ಕಲ್ ನಲ್ಲಿ 6.9 ಕೋಟಿ ರು.ಗಳ ಬಿಳಗುಂಬ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.