ಕನ್ನಡಪ್ರಭ ವಾರ್ತೆ ಬೆಂಗಳೂರು
ಆಗಷ್ಟೇ ಆರೆಸ್ಸೆಸ್ ಪಥಸಂಚಲನದಿಂದ ಮರಳಿ ಡಿಕೆಶಿ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಗಣವೇಷದಲ್ಲೇ ಆಗಮಿಸಿದ ಶಾಸಕ ಮುನಿರತ್ನ ಅವರು, ತಮಗೆ ಸಮಾರಂಭಕ್ಕೆ ಆಹ್ವಾನ ಇಲ್ಲದಿದ್ದರೂ, ‘ಸಾರ್ವಜನಿಕನಾಗಿ ಬಂದಿದ್ದೇನೆ’ ಎಂದು ಹೇಳಿ ಅಚ್ಚರಿ ಮೂಡಿಸಿದರು. ಈ ವೇಳೆ ನಾಟಕೀಯ ವಿದ್ಯಮಾನಗಳು ನಡೆದು ಸ್ಥಳದಲ್ಲಿ ಉದ್ವಿಗ್ನ ವಾತಾವರಣಕ್ಕೂ ನಾಂದಿ ಹಾಡಿತು.
ಆಗಿದ್ದೇನು?:ಮೊದಲು ಡಿ.ಕೆ.ಶಿವಕುಮಾರ್ ಅವರು ರಾಜರಾಜೇಶ್ವರಿ ನಗರದ ಕಾಂಗ್ರೆಸ್ ನಾಯಕಿ, ಮುನಿರತ್ನ ಅವರ ಎದುರಾಳಿ ಕುಸುಮಾ ಜತೆಗೂಡಿ ಪಾರ್ಕ್‌ನ ವಿವಿಧ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸಾರ್ವಜನಿಕರ ಮಧ್ಯೆ ಜನ ಸಾಮಾನ್ಯರಂತೆ ಗಣವೇಷ ಧರಿಸಿ ಅಚ್ಚರಿಯ ರೀತಿ ಶಾಸಕ ಮುನಿರತ್ನ ಬಂದು ನಿಂತಿದ್ದರು. ಅವರನ್ನು ಡಿಕೆಶಿ ನೋಡಿಯೂ ನೋಡದಂತೆ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದರು.
ತದ ನಂತರ ಕಾರ್ಯಕ್ರಮದ ಸ್ವಾಗತಕಾರರು, ಡಿಕೆಶಿ ಜತೆಗೆ ಶಾಸಕರನ್ನೂ ಸ್ವಾಗತಿಸಿದರು. ಆಗ ಮತ್ತೆ ವೇದಿಕೆಗೆ ಬಂದ ಮುನಿರತ್ನ ಅಧಿಕಾರಿಯಿಂದ ಮೈಕ್ ಕಿತ್ತುಕೊಂಡು, ‘ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಸಂಸದರ ಹಾಗೂ ಶಾಸಕರ ಫೋಟೋ ಹಾಕಿಲ್ಲ. ಅಧಿಕೃತವಾಗಿ ಶಾಸಕರಿಗೆ ಜಿಬಿಎ ಮುಖ್ಯ ಆಯುಕ್ತರು ಆಹ್ವಾನಿಸಿಲ್ಲ. ಒಬ್ಬ ಶಾಸಕನಿಗೆ ನೀಡಬೇಕಾದ ಗೌರವ ಕೊಟ್ಟಿಲ್ಲ’ ಎಂದು ಹರಿಹಾಯ್ದರು.
‘ಇದು ಸಾರ್ವಜನಿಕರ ಕುಂದು-ಕೊರತೆ ಸಭೆಯೆ ಎಂಬ ಅನುಮಾನ ಮೂಡುತ್ತಿದೆ. ಇದು ಕಾಂಗ್ರೆಸ್ ಕಾರ್ಯಕ್ರಮ’ ಎಂದು ಹೇಳುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಮೈಕ್ ಕಿತ್ತುಕೊಳ್ಳುವಂತೆ ಆಗ್ರಹಿಸಿದರು. ವೇದಿಕೆಯಿಂದ ಕೆಳಗಿಳಿಯೋ ಮೊದಲು, ನಿನಗೆ ನಾಚಿಕೆ ಆಗಬೇಕು ಎಂದು ಶಾಸಕರೊಂದಿಗೆ ನೇರವಾಗಿ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಈ ವೇಳೆ ‘420 ಮುನಿರತ್ನನಿಗೆ ಧಿಕ್ಕಾರ’ ಎಂಬ ಘೋಷಣೆ ಕೂಗಿದರು. ಆಗ ವೇದಿಕೆ ಮೇಲೆ ಕೆಲಕಾಲ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಹೈಡ್ರಾಮವೇ ನಡೆಯಿತು. ಕೊನೆಗೆ ಪೊಲೀಸರು, ಮುನಿರತ್ನ ಅವರನ್ನು ಜೆ.ಪಿ.ಪಾರ್ಕ್‌ನಿಂದ ಹೊರ ಕರೆದುಕೊಂಡು ಹೋದರು. ಆಗ ಮುನಿರತ್ನ ಗಾಂಧೀಜಿ ಫೋಟೋ ಇಟ್ಟುಕೊಂಡು ಡಿಕೆಶಿಯಿಂದ ನನಗ ಹಾಗೂ ಆರೆಸ್ಸೆಸ್‌ಗೆ ಅವಮಾನವಾಗಿದೆ ಎಂದು ಪ್ರತಿಭಟನೆ ನಡೆಸಿದರು.